ಕಾಂಗ್ರೆಸ್‌ ಪಾದಯಾತ್ರೆಗೆ ಬೀಳುತ್ತಾ ಬ್ರೇಕ್‌ ?

ಬೆಂಗಳೂರು ಜ 8 : ಬಹು ಉದ್ದೇಶಿತ ಕಾಂಗ್ರೆಸ್‌ ಪಾದಯಾತ್ರೆಗೆ ಈಗಾಗಲೇ ಕಾರ್ಯಕರ್ತರು ಸಜ್ಜುಗೊಂಡಿದ್ದು ಆದರೆ ಅಂತಿಮ ಕ್ಷಣದಲ್ಲಿ ಪಾದಯಾತ್ರೆಗೆ ಬ್ರೇಕ್‌ ಬೀಳುವ ಸಂಭವವಿದೆ. ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ವಿಧಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

ಪಾದಯಾತ್ರೆಗೆ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಮೇಕೆದಾಟುವಿಗೆ ಹೋಗಲು ಪಂಚಾಯಿತಿ ಮಟ್ಟದಲ್ಲಿ ವಾಹನ ವ್ಯವಸ್ಥೆ ಮಾಡಿ ಜನರನ್ನು ಸಜ್ಜುಗೊಳಿಸಿದ್ದಾರೆ. ಆದರೆ, ಕಳೆದೆರಡು ದಿನಗಳಿಂದ ಪೊಲೀಸರು ಕೈಗೊಳ್ಳುತ್ತಿರುವ ಕ್ರಮ ಹಾಗೂ ವೈರಸ್ ಹರಡುವ ಭೀತಿಯು ಹಲವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತು ಮರುಚಿಂತನೆ ಮಾಡಲು ಆರಂಭಿಸಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಪಾದಯಾತ್ರೆಯನ್ನು ಮೊಟಕುಗೊಳಿಸಲು ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗದಂತೆ ಮಾಡಲು ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಈ ಹಿಂದೆ ವಾರಾಂತ್ಯದ ಕರ್ಫ್ಯೂ ಉಲ್ಲಂಘಿಸಬೇಡಿ ಎಂದು ಹೇಳಿದ್ದ ಪಕ್ಷದ ಸ್ಥಳೀಯ ಮುಖಂಡರು ಸೋಮವಾರ ಹಿರಿಯ ನಾಯಕರನ್ನು ಜೊತೆಗೂಡಿ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರನ್ನು ಮೇಕೆದಾಟುವಿಗೆ ಕರೆದೊಯ್ಯಲು ಬಸ್ಸುಗಳು, ಟ್ರಕ್‌ಗಳನ್ನು ಕಾಯ್ದಿರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರಿಗೆ ವಸತಿ, ಊಟ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಘಟಕಗಳು ರ್ಯಾಲಿಗೆ ಸಿದ್ಧತೆ ನಡೆಸಿದ್ದು, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ಮತ್ತು ಚಾಮರಾಜನಗರದಿಂದ ರ್ಯಾಲಿಗೆ ಜನರನ್ನು ಕರೆತರಲು ಶಾಸಕರನ್ನು ನಿಯೋಜಿಸಲಾಗಿದೆ ಎಂದು  ಪಕ್ಷದ ಮೂಲಗಳಿ ಸ್ಷಷ್ಟಪಡಿಸಿವೆ

Exit mobile version