ಕಾಂಗ್ರೆಸ್ ಸ್ಥಾಪನೆ 1885 – ಅಂತ್ಯ??

congress

ಪಂಚರಾಜ್ಯಗಳ ಫಲಿತಾಂಶದ ನಂತರ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅಂತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. 1885ರಲ್ಲಿ ಬ್ರಿಟಿಷ್ ಅಧಿಕಾರಿ ಎ.ಒ.ಹ್ಯೂಮ್ ಅವರಿಂದ ಸ್ಥಾಪನೆಯಾದ ಕಾಂಗ್ರೆಸ್ ಇಟಲಿಯ ರಾಹುಲ್ ಗಾಂಧಿಯೊಂದಿಗೆ 2024ರಲ್ಲಿ ಅಂತ್ಯವಾಗುತ್ತದೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ಮಧ್ಯೆ ಪಂಚರಾಜ್ಯಗಳ ಸೋಲಿನ ನಂತರ ಕಾಂಗ್ರೆಸ್‍ನಲ್ಲಿ ನಾಯಕತ್ವ ಬದಲಾವಣೆಯ ಕುರಿತು ಜಿ-23 ನಾಯಕರು ಮತ್ತೆ ಧ್ವನಿಯೆತ್ತಿದ್ದಾರೆ.

ಇನ್ನಾದರೂ ಗಾಂಧಿ ಮನೆತನದ ಹೊರತಾದ ವ್ಯಕ್ತಿಗೆ ನಾಯಕತ್ವ ನೀಡಿ, ಇಲ್ಲವಾದರೆ ಇಡೀ ಕಾಂಗ್ರೆಸ್ ಪಕ್ಷವೇ ನಿರ್ಣಾಮವಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಗಾಂಧಿ ಕುಟುಂಬಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಆದರೆ ಇನ್ನೂ ಕೆಲವರು ಗಾಂಧಿ ಕುಟುಂಬದ ಹೊರತಾದ ನಾಯಕತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಗೆ ನಾಯಕತ್ವ ನೀಡಿದ್ರೆ, ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಉಳಿಯುವುದಿಲ್ಲ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಿಜೆಪಿ ಎದುರು ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್, ಸದ್ಯ ಹೀನಾಯ ಸ್ಥಿತಿ ತಲುಪಿದೆ.

ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವೂ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಯುವ ಮತದಾರರನ್ನು ಸೆಳೆಯುವಲ್ಲಿ ರಾಹುಲ್ ಗಾಂಧಿ ಮತ್ತೆ ಮತ್ತೆ ವಿಫಲರಾಗುತ್ತಿದ್ದಾರೆ. ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಉತ್ತರಪ್ರದೇಶದಲ್ಲಿಯೂ ಕಾಂಗ್ರೆಸ್ ‘ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ’ ಎಂಬ ಸ್ಥಿತಿ ತಲುಪಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಃ ರಾಹುಲ್ ಗಾಂಧಿ ತಮ್ಮ ಅಮೇಥಿ ಕ್ಷೇತ್ರದಲ್ಲಿ ಪರಾಭವಕೊಂಡಿದ್ದರು. ಈಗ ವಿಧಾನಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿರುವ ರಾಯ್‍ಬರೇಲಿ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದು ಬೀಗಿದೆ.

ಇನ್ನು ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಕಾಂಗ್ರೆಸ್ ಕೇವಲ ರಾಜಸ್ಥಾನ ಮತ್ತು ಛತ್ತೀಸ್‍ಘಡ್‍ನಲ್ಲಿ ಮಾತ್ರ ಅಧಿಕಾರ ನಡೆಸುತ್ತಿದೆ. ಅಲ್ಲಿಯೂ ಪ್ರಬಲ ಪ್ರಾದೇಶಿಕ ನಾಯಕರಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಆ ರಾಜ್ಯಗಳು ಕೂಡಾ ಬಿಜೆಪಿ ಪಾಲಾಗಲಿವೆ ಎಂದೇ ಹೇಳಲಾಗುತ್ತಿದೆ. ಇನ್ನು ಪ್ರಾದೇಶಿಕ ಪಕ್ಷಗಳು 9 ರಾಜ್ಯಗಳಲ್ಲಿ ಅಧಿಕಾರದಲ್ಲಿವೆ. ಒಡಿಸ್ಸಾ, ತೆಲಂಗಾಣ, ಆಂದ್ರಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ ಮತ್ತು ಇದೀಗ ಪಂಜಾಬ್ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದ ಸೂತ್ರ ಹಿಡಿದಿವೆ.

ತೃತೀಯ ರಂಗದ ಕನಸು ಕಾಣುತ್ತಿರುವ ಮಮತಾ ಬ್ಯಾನರ್ಜಿ ಮತ್ತು ಕೆಸಿಆರ್ ಅವರಂತ ಪ್ರಾದೇಶಿಕ ನಾಯಕರು ಕೂಡಾ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ದೇಶಾದ್ಯಂತ ದಿನೆ ದಿನೇ ನೇಪತ್ಯಕ್ಕೆ ಸರಿಯುತ್ತಿದೆ. ಕಾಂಗ್ರೆಸ್ ಪಕ್ಷದ ಸ್ಥಾನವನ್ನು ಪ್ರಾದೇಶಿಕ ಪಕ್ಷಗಳು ಆಕ್ರಮಿಸುತ್ತಿವೆ ಹೊರತು, ಪ್ರಾದೇಶಿಕ ಪಕ್ಷಗಳನ್ನು ಎದುರಿಸುವ ಶಕ್ತಿಯನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ.

Exit mobile version