ಮಹಿಳೆಯರಿಗೆ ಶೇ.33% ಮತ್ತು 50 ವರ್ಷದೊಳಗಿನವರಿಗೆ ಶೇ.50% ಮೀಸಲಾತಿ : ಡಿಕೆ ಶಿವಕುಮಾರ್!

dks

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹಿಳೆಯರಿಗಾಗಿ ಶೇ 33% ಮೀಸಲಾತಿ ಹಾಗೂ 50 ವರ್ಷದೊಳಗಿರುವವರಿಗೆ ಶೇ 50% ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ(Congress State President) ಡಿ.ಕೆ.ಶಿವಕುಮಾರ್(DK Shivkumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ(Bengaluru) ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್‍ನ 2 ದಿನಗಳ ನವಸಂಕಲ್ಪ ಶಿಬಿರದಲ್ಲಿ ಮುಂಬರುವ ಚುನಾವಣೆಗಾಗಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬಹು ಮುಖ್ಯವಾಗಿ ಜೂನ್ 25ರಂದು ಸ್ಥಳೀಯವಾಗಿ ಕಾಂಗ್ರೆಸ್‍ನ ವಿವಿಧ ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಈ ಚುನಾವಣೆಯಲ್ಲಿ ಮೀಸಲಾತಿ ನೀಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.

ನಿರುದ್ಯೋಗ ಸಮಸ್ಯೆ(Unemployment Problem) ರಾಜ್ಯವನ್ನು ಕಾಡುತ್ತಿದೆ. ಎಲ್ಲಿ ಉದ್ಯೋಗಾವಕಾಶಗಳಿವೆಯೋ ಅಲ್ಲಿ ತ್ವರಿತವಾಗಿ ನೇಮಕಾತಿ ಮಾಡಬೇಕೆನ್ನುವುದು ನಮ್ಮ ಗುರಿ. ಬ್ಯಾಕ್‍ಲಾಗ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನೂ ಕೂಡ ತ್ವರಿತವಾಗಿ ಮುಗಿಸುವ ಗುರಿ ನಮ್ಮ ಮುಂದಿದೆ. ಕಡು ಬಡವರಿಗೆ ನೀಡುತ್ತಿರುವ ವಸತಿ ಯೋಜನೆಯಲ್ಲೂ ಬದಲಾವಣೆ ಮಾಡಬೇಕೆಂದಿದ್ದೇವೆ. ಬೆಂಗಳೂರು ನಗರ, ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಬಯಲುಸೀಮೆ ಮೊದಲಾದ ಭಾಗಗಳಿಗೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ.

2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ರೈತ ವರ್ಗದ ಅಭಿವೃದ್ಧಿಗಾಗಿ 5 ವರ್ಷಗಳಿಗೆ 2 ಲಕ್ಷ ಕೋಟಿ ಮೀಸಲಿಟ್ಟು ಪ್ರತಿ ವರ್ಷ 40 ಸಾವಿರ ಕೋಟಿ ವಿನಿಯೋಗ ಮಾಡಬೇಕೆಂಬ ಆಶಯ ನಮ್ಮದು ಎಂದರು. ಯುವ ಸಮೂಹವನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳಲಿದ್ದೇವೆ. ಹಾಗೆಯೇ ಯುವಕರನ್ನು ಕೋಮುವಾದದಿಂದ ಮುಕ್ತಗೊಳಿಸಲು ಯೋಜನೆ ಹಾಕಿಕೊಂಡಿದ್ದೇವೆ.

ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಶ್ರಮಿಸಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version