ಒಂದು ಮನೆಗೆ ಒಂದೇ ಟಿಕೆಟ್ ನಮಗೆ ಅನ್ವಯವಾಗಲ್ಲ : ಶಾಮನೂರು!

ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಕಾಂಗ್ರೆಸ್ ಪಕ್ಷದ(Congress Party) ನೀತಿ ನಮ್ಮ ಕುಟುಂಬಕ್ಕೆ ಅನ್ವಯವಾಗಲ್ಲ. ಕಾಂಗ್ರೆಸ್ ಪಕ್ಷದ ಮೂಲಕ ಸ್ಪರ್ಧಿಸಿ ಗೆಲ್ಲಬೇಕಷ್ಟೇ ಎಂದು ಕಾಂಗ್ರೆಸ್‍ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ(Shamanuru Shivshankarappa) ತಿಳಿಸಿದ್ದಾರೆ.

ದಾವಣಗೆರೆಯಲ್ಲಿ(Davanagere) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಮನೆಗೆ ಒಂದೇ ಟಿಕೆಟ್ ನೀತಿ ನಮ್ಮ ಕುಟುಂಬಕ್ಕೆ ಅನ್ವಯವಾಗಲ್ಲ. ನಾವು ಕೇಳಿದರೆ ನಾಲ್ಕು ಟಿಕೆಟ್‍ಗಳನ್ನು ನಮ್ಮ ಮನೆಯವರಿಗೆ ಕೊಡುತ್ತಾರೆ. ಪಕ್ಷಕ್ಕೆ ಗೆಲ್ಲುವುದು ಮುಖ್ಯ. ಇನ್ನು ನಾನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಆದರೆ ಮುಖ್ಯಮಂತ್ರಿ ಆಗುತ್ತೇನೋ.. ಇಲ್ಲವೋ ಗೊತ್ತಿಲ್ಲ. ಬೇಕಿದ್ದರೆ ಕೋಡಿಹಳ್ಳಿ ಮಠದ ಶ್ರೀಗಳನ್ನು ನೀವು ಈ ಬಗ್ಗೆ ಭವಿಷ್ಯ ಕೇಳಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಇನ್ನು ಜಗದೀಶ್ ಶೆಟ್ಟರ್(Jagadish Shettar) ನಮ್ಮ ಮನೆಯ ಮದುವೆಗೆ ಬರುವುದರಲ್ಲಿ ತಪ್ಪೇನಿದೆ. ನಾವು ಅವರು ಸಂಬಂಧಿಗಳು ಹೀಗಾಗಿ ರಾಜಕೀಯ ಹೊರತಾಗಿ ನಾವು ಉತ್ತಮ ಸಂಬಂಧ ಹೊಂದಿದ್ದೇವೆ. ನಾವೆಲ್ಲಾ ವೀರಶೈವ ಲಿಂಗಾಯತರು. ನನ್ನ ಮನೆ ಮುಂಬರುವ ದಿನಗಳಲ್ಲಿ ರಾಜಕೀಯ ಶಕ್ತಿಕೇಂದ್ರ ಯಾಕೆ ಆಗಬಾರದು..? ಎಂದು ಪ್ರಶ್ನಿಸಿದರು. ಇನ್ನು ಕಳೆದ ತಿಂಗಳು ಕಾಂಗ್ರೆಸ್ ರಾಜಸ್ಥಾನದಲ್ಲಿ ‘ರಾಷ್ಟ್ರೀಯ ಚಿಂತನಾ ಶಿಬಿರ’ ನಡೆಸಿತ್ತು.

ಈ ವೇಳೆ ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್’ ಎಂಬ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ನೀತಿಯ ಬಗ್ಗೆ ಕಾಂಗ್ರೆಸ್‍ನಲೇ ಅಪಸ್ವರ ಕೇಳಿಬಂದಿತ್ತು. ಗಾಂಧಿ ಕುಟುಂಬಕ್ಕೆ ಈ ನೀತಿಯಿಂದ ವಿನಾಯಿತಿ ನೀಡಲಾಗಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ ಈ ಕುರಿತು ಕಾಂಗ್ರೆಸ್ ಯಾವುದೇ ಸ್ಪಷ್ಟನೆಯನ್ನು ನೀಡಿರಲಿಲ್ಲ.

Exit mobile version