2023ರ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದ ಕಾಂಗ್ರೆಸ್!

congress

ಮುಂಬರುವ ರಾಜ್ಯ(State) ವಿಧಾನಸಭಾ ಚುನಾವಣೆಗೆ(Vidhanasabha Elections)ಕಾಂಗ್ರೆಸ್(Congress) ಸಿದ್ದತೆ ಪ್ರಾರಂಭಿಸಿದೆ. 2023ರ ಏಪ್ರಿಲ್(April) ಅಥವಾ ಮೇನಲ್ಲಿ(May) ಗುಜರಾತ್(Gujarat), ಹಿಮಾಚಲ ಪ್ರದೇಶ(Himachal Pradesh) ಮತ್ತು ಕರ್ನಾಟಕ(Karnataka) ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿವೆ. ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ.

ಇನ್ನು ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಕಾಂಗ್ರೆಸ್ ಸಾಕಷ್ಟು ಪ್ರಬಲವಾಗಿದೆ. ಆದರೆ ಸಂಘಟನಾತ್ಮಕ ಮತ್ತು ನಾಯಕತ್ವದ ಸಮಸ್ಯೆಯಿಂದ ರಾಜ್ಯ ಕಾಂಗ್ರೆಸ್ ಸ್ವಲ್ಪ ಹಿನ್ನಡೆ ಅನುಭವಿಸಿದೆ. ಆದರೆ ತನ್ನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡರೆ, ಕಾಂಗ್ರೆಸ್ ಬಿಜೆಪಿಗೆ ತಕ್ಕ ಪೈಪೋಟಿಯನ್ನು ನೀಡಬಲ್ಲದು. ಇನ್ನು ರಾಜ್ಯ ಬಿಜೆಪಿ ಈಗಾಗಲೇ ಚುನಾವಣೆಗೆ ಕೆಳಹಂತದಲ್ಲಿ ಸಿದ್ದತೆ ಪ್ರಾರಂಭಿಸಿದೆ. ಬೂತ್ ಮಟ್ಟದಲ್ಲಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇನ್ನೊಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಹೆಚ್ಚಿನ ಮುತುವರ್ಜಿ ವಹಿಸಿದೆ.

ಹೀಗಾಗಿಯೇ ಈಗಿನಿಂದಲೇ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ಚುನಾವಣೆ ಘೋಷಣೆಯಾದ ನಂತರ ಅಭ್ಯರ್ಥಿಗಳ ಹುಡುಕಾಟ ನಡೆಸಿದರೆ, ಪಕ್ಷದಲ್ಲಿ ಗೊಂದಲ ಉಂಟಾಗುತ್ತದೆ. ಹೀಗಾಗಿ ಸಮೀಕ್ಷೆ ಮಾಡಿಸಿ, ಈಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಟ್ಟುಕೊಳ್ಳುವುದು ಉತ್ತಮ ಎಂದು ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟ ಪ್ರಾರಂಭಿಸಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಕರಾವಳಿ ಹೊರತುಪಡಿಸಿ ಉಳಿದೆಡೆ ಉತ್ತಮ ನೆಲೆ ಹೊಂದಿದೆ. ಹೀಗಾಗಿ ಹಳೇಮೈಸೂರು, ಉತ್ತರಕರ್ನಾಟಕ, ಮಧ್ಯಕರ್ನಾಟಕದ ಮೇಲೆ ಹೆಚ್ಚಿನ ಗಮನ ಹರಿಸಲು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದಾರೆ.

ಇನ್ನು 150 ಗೆಲ್ಲುವ ಕ್ಷೇತ್ರಗಳನ್ನು ಗುರುತಿಸಿ, ಅಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಂತ್ರ ರೂಪಿಸಲಾಗಿದೆ. ಹಳೇಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿಹಾಕಲು, ಅತೃಪ್ತ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಜಿ.ಟಿ.ದೇವೇಗೌಡರಂತ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಚುನಾವಣೆ ಸಮೀಪಿಸಿದ ನಂತರ ಸಾಕಷ್ಟು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಬಹುದು ಎಂಬ ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್.

ಇನ್ನು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪ್ರತ್ಯೇಕ ಸಮೀಕ್ಷೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಏಪ್ರಿಲ್ ಮತ್ತು ಮೇನಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ನಂತರ ಪ್ರತಿ ತಿಂಗಳು ಉಂಟಾಗುವ ಬದಲಾವಣೆಯ ಮೇಲೆ ಚುನಾವಣೆ ಎರಡು ತಿಂಗಳು ಇರುವಾಗ ಅಭ್ಯರ್ಥಿಯನ್ನು ಘೋಷಣೆ ಮಾಡುವ ಲೆಕ್ಕಾಚಾರವನ್ನು ಈ ಇಬ್ಬರು ನಾಯಕರು ಹೊಂದಿದ್ದಾರೆ.

Exit mobile version