ರಾಜ್ಯಸಭಾ, ಪರಿಷತ್ ಆಯ್ಕೆಗೆ ಕಾಂಗ್ರೆಸ್‍ನಲ್ಲಿ ತೀವ್ರ ಪೈಪೋಟಿ!

congress

ಜೂನ್‍ನಲ್ಲಿ ನಡೆಯುವ ರಾಜ್ಯಸಭಾ(Rajya Sabha) ಮತ್ತು ವಿಧಾನಪರಿಷತ್ ಚುನಾವಣೆ(VidhanParishath Election) ಟಿಕೆಟ್‍ಗಾಗಿ ಕಾಂಗ್ರೆಸ್‍ನಲ್ಲಿ(Congress) ಭಾರೀ ಪೈಪೋಟಿ ಶುರುವಾಗಿದೆ.

ಕಿರಿಯ ಮತ್ತು ಹಿರಿಯ ನಾಯಕರು ಟಿಕೆಟ್‍ಗಾಗಿ ತೀವ್ರ ಪ್ರಯತ್ನ ಆರಂಭಿಸಿದ್ದಾರೆ. ಈ ಸಂಬಂಧ ಚರ್ಚೆ ನಡೆಸಲು ರಾಜ್ಯ ಕಾಂಗ್ರೆಸ್ ಅಧ್ಯಕ್ಷ(Congress President) ಡಿ.ಕೆ. ಶಿವಕುಮಾರ್(DK Shivkumar) ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಇಂದು ದೆಹಲಿಗೆ(Delhi) ತೆರಳಲಿದ್ದಾರೆ ಎನ್ನಲಾಗಿದೆ. ಇನ್ನು ವಿಧಾನಸಭೆಯಿಂದ ವಿಧಾನಪರಿಷತ್‍ನ ಏಳು ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಪಕ್ಷದ ವಿಧಾನಸಭಾ ಸದಸ್ಯರ ಸಂಖ್ಯಾಬಲದ ಆಧಾರದ ಮೇಲೆ 2 ಸ್ಥಾನಗಳನ್ನು ಗೆಲ್ಲಬಹುದು. ಹೀಗಾಗಿ ಆ ಎರಡು ಸ್ಥಾನಗಳಿಗಾಗಿ ಹಿರಿತನ, ಪ್ರಾದೇಶಿಕತೆ, ಜಾತಿ, ಸಂಘಟನೆ ಸೇರಿದಂತೆ ಅನೇಕ ಅಂಶಗಳ ಆಧಾರದ ಮೇಲೆ ಟಿಕೆಟ್ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡುವ ಸಲಹೆಯಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿದೆ.

ಇನ್ನು ಕಾಂಗ್ರೆಸ್‍ನಲ್ಲಿ ಟಿಕೆಟ್ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಮುಸುಕಿನ ಗುದ್ದಾಟವಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಯ ಚಂಡು ಹೈಕಮಾಂಡ್ ಅಂಗಳಕ್ಕೆ ಹೋಗಿದ್ದು, ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಇನ್ನು ಆರ್.ಬಿ.ತಿಮ್ಮಾಪುರ, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ ಕಾಂಗ್ರೆಸ್‍ನಿಂದ ನಿವೃತ್ತಿಯಾಗಲಿರುವ ಸದಸ್ಯರು. ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ ಮರು ಆಯ್ಕೆ ಬಯಸಿದ್ದಾರೆ.

ಆದರೆ ಸ್ಥಳೀಯ ಸಂಸ್ಥೆಗಳ ಮೂಲಕ ಪರಿಷತ್‍ಗೆ ಆಯ್ಕೆಯಾಗಲು ಟಿಕೆಟ್ ಸಿಗದೇ ಕೋಪಗೊಂಡಿರುವ ಎಸ್.ಆರ್.ಪಾಟೀಲ್ ಇದೀಗ ವಿಧಾನಸಭೆಯ ಮೂಲಕ ವಿಧಾನಪರಿಷತ್‍ಗೆ ಆಯ್ಕೆಯಾಗಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ಐವನ್ ಡಿಸೋಜಾ ಅಲ್ಪಸಂಖ್ಯಾತ ಕೋಟಾದಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದರೆ, ಯುವನಾಯಕ ಸೂರಜ್ ಹೆಗ್ಡೆ ಕೂಡಾ ಡಿ.ಕೆ.ಶಿವಕುಮಾರ್ ಮೂಲಕ ಟಿಕೆಟ್‍ಗಾಗಿ ಲಾಬಿ ಆರಂಭಿಸಿದ್ದಾರೆ.

ಇನ್ನು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ರಾಜ್ಯ ವಿಧಾನಸಭೆಯಿಂದ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರ ಗೆಲ್ಲಬಹುದು. ಹಾಲಿ ಸದಸ್ಯ ಜೈರಾಮ್ ರಮೇಶ್ ಮರು ಆಯ್ಕೆಯಾಗಲು ಪ್ರಯತ್ನ ನಡೆಸಿದ್ದಾರೆ. ಆದರೆ ಮರಳಿ ಟಿಕೆಟ್ ನೀಡದಂತೆ ರಾಜ್ಯ ನಾಯಕರು ಹೈಕಮಾಂಡ್ ನಾಯಕರಿಗೆ ಸಲಹೆ ನೀಡಿದ್ದಾರೆ.

ಹೀಗಾಗಿ ಮಾಜಿ ಸಂಸದ ಮುದ್ದಹನುಮೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಡಿಕೆಶಿ ಮತ್ತು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಅಂತಿಮವಾಗಿ ಹೈಕಮಾಂಡ್ ರಾಜ್ಯಸಭೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ.

Exit mobile version