ಮಸ್ಕಿಯಲ್ಲಿ ಕಾಂಗ್ರೆಸ್ ನ ಬಸನಗೌಡ ತುರ್ವಿಹಾಳ ಗೆಲುವು

ರಾಯಚೂರು, ಮೇ. 02: ತೀವ್ರ ಕುತೂಹಲ ಮೂಡಿಸಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅನಿರೀಕ್ಷಿತವಾದರೂ ಭರ್ಜರಿ ಜಯವನ್ನು ಕಾಂಗ್ರೆಸ್ ನ ಬಸನಗೌಡ ತುರ್ವಿಹಾಳ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮೂರು ಬಾರಿ ಮಸ್ಕಿಯಲ್ಲಿ ಗೆಲುವು ಸಾಧಿಸಿದ್ದ ಪ್ರತಾಪಗೌಡ ಪಾಟೀಲರಿಗೆ ಪ್ರಥಮಬಾರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಜೊತೆಗೆ ಆಡಳಿತರೂಢ ಬಿಜೆಪಿ ಪಕ್ಷಕ್ಕೂ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.
ಏಪ್ರಿಲ್ 17ರಂದು ನಡೆದ ಮಸ್ಕಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಇಂದು ರಾಯಚೂರಿನ ಎಸ್ಆರ್ ಪಿಎಸ್ ಕಾಲೇಜಿನಲ್ಲಿ ನಡೆಯಿತು. ಆರಂಭದಿಂದ 26ನೆಯ ಸುತ್ತಿನವರೆಗೂ ಕಾಂಗ್ರೆಸ್ ನ ಬಸನಗೌಡ ತುರ್ವಿಹಾಳ ಮುನ್ನಡೆ ಸಾಧಿಸುತ್ತಾ ಬಂದಿದ್ದಾರೆ. ಒಟ್ಟು 145459 ಮತಗಳು ಚಲಾವಣೆಗೊಂಡಿದ್ದು, ಅದರಲ್ಲಿ ಬಿಜೆಪಿಯ ಪ್ರತಾಪಗೌಡ ಪಾಟೀಲ 55645 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಬಸನಗೌಡ ತುರ್ವಿಹಾಳ 86,222 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ 2018 ರಲ್ಲಿ ಕೇವಲ 213 ಮತಗಳ ಅಂತರದಲ್ಲಿ ಪ್ರತಾಪಗೌಡರ ವಿರುದ್ದ ಸೋಲು ಅನುಭವಿಸಿದ್ದ ಬಸನಗೌಡ ತುರ್ವಿಹಾಳ ಉಪಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಹಿಂದಿನ‌ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.
2008 ರಲ್ಲಿ ವಿಧಾನಸಭಾ ಕ್ಷೇತ್ರವಾಗಿರುವ ಮಸ್ಕಿ ವಿಧಾನಸಭೆಗೆ ಮೊದಲು ಬಾರಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ ಆಯ್ಕೆಯಾಗಿದ್ದರು. ಬಳಿಕ 2013 ರಲ್ಲಿ ಕಾಂಗ್ರೆಸ್ ಹಾಗೂ 2018 ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು. 2018 ರಲ್ಲಿ ಸಚಿವರಾಗುವ ಆಸೆ ಹೊಂದಿದ್ದರು. ಆದರೆ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಲಿಲ್ಲ. ಇದೇ ಕಾರಣಕ್ಕೆ ಆಪರೇಷನ್ ಕಮಲಕ್ಕೊಳಗಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿ ಈಗ ಸೋಲು ಅನುಭವಿಸಿದ್ದಾರೆ. ಮಸ್ಕಿ ಉಪಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಗೆಲುವಿನ ಹೊಣೆಗಾರಿಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರರಿಗೆ ವಹಿಸಿದ್ದರು. ವಿಜಯೇಂದ್ರ ಜಾತಿವಾರು ಮುಖಂಡರ ಸಭೆ ಮಾಡಿದ್ದರು. ಯುವಕರೊಂದಿಗೆ ಕ್ಷೇತ್ರದಲ್ಲಿ ಸಭೆ ಸೇರಿ ಇತರೆ ತಂತ್ರಗಳನ್ನು ಮಾಡಿದ್ದರೂ ಉಪಚುನಾವಣೆ ಜವಾಬ್ದಾರಿಗಳಲ್ಲಿ ವಿಜಯೇಂದ್ರ ಸಹ ಇದೇ ಮೊದಲು ಬಾರಿಗೆ ಸೋಲು ಅನುಭವಿಸಿದ್ದಾರೆ. ಸಿರಾ ಹಾಗು ಕೆ ಆರ್ ಪೇಟೆಯ ತಂತ್ರ ಇಲ್ಲಿ ಫಲ ಕೊಡಲಿಲ್ಲ. ಇದು ಸಹ ವಿಜಯೇಂದ್ರರಿಗೆ ಎಚ್ಚರಿಕೆ ಗಂಟೆಯಾಗಿದೆ.

Exit mobile version