ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧಾರ

ಬೆಂಗಳೂರು, ಜ. 29: ರಾಜ್ಯ ಸರ್ಕಾರ ಏಕಪಕ್ಷೀಯ ಹಾಗೂ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಗಳಿಂದ ದೂರ ಉಳಿಯಲು ನಿರ್ಧರಿಸಿದೆ.

ಈ ಬಗ್ಗೆ ಅಧಿವೇಶನದ ಸಂದರ್ಭದಲ್ಲಿ ಸದನದ ಕಾರ್ಯಕಲಾಪಗಳು ಸುಗಮವಾಗಿ ನಡೆಸಲು ಸದನದ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ನಿಯಮ 240ರಂತೆ ರಚಿಸಲಾಗಿದೆ. ಸದರಿ ಸಮಿತಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಮುಖಂಡರುಗಳ ಸಮಕ್ಷಮದಲ್ಲಿ ಸದನ ಹೇಗೆ ನಡೆಯಬೇಕು, ಯಾವ ವಿಷಯ ಚರ್ಚಿಸಬೇಕು, ಸಮಯ ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಸದಸ್ಯರು ಯಾವ ವಿಷಯವನ್ನು ಎಷ್ಟು ಪ್ರಸ್ತಾಪಿಸಬೇಕು ಇತ್ಯಾದಿ ವಿಷಯಗಳನ್ನು ಚರ್ಚಿಸಿ ಗೊಂದಲಗಳಿಗೆ ಅವಕಾಶವಿಲ್ಲದೆ ಸದನ ನಡೆಸಲು ತೀರ್ಮಾನಿಸಲಾಗುತ್ತದೆ. ಸದರಿ ತೀರ್ಮಾನದಂತೆ ಸದನಕ್ಕೆ ತಿಳಿಸಿ ಅದರಂತೆ ಸದನವನ್ನು ನಡೆಸಲಾಗುತ್ತದೆ.

ಆದರೆ, ರಾಜ್ಯ ಸರ್ಕಾರವು ಸದನದ ಕಾರ್ಯಕಲಾಪಗಳ ಸಲಹಾ ಸಮಿತಿಯಲ್ಲಿ ತೀರ್ಮಾನ ಮಾಡಿದ ವಿಷಯಗಳನ್ನು, ವಿಧಾನಗಳನ್ನು ಸಂಪೂರ್ಣ ಉಲ್ಲಂಘಿಸಿ, ಏಕಪಕ್ಷೀಯವಾಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಇದು ಸದನದ ಕಾರ್ಯಕಲಾಪ ಸಲಹಾ ಸಮಿತಿಗೆ ಮಾಡುತ್ತಿರುವ ಅವಮಾನವಾಗಿದೆ.

ಬಿಜೆಪಿಯವರ ಸರ್ವಾಧಿಕಾರಿ ಧೋರಣೆಯಿಂದಾಗಿ ಸದನದ ಕಾರ್ಯಕಲಾಪ ಸಲಹಾ ಸಮಿತಿಯು ತನ್ನೆಲ್ಲಾ ಪಾವಿತ್ರ್ಯತೆಯನ್ನು ಕಳೆದುಕೊಂಡು ನಾಮಕಾವಸ್ತೆಗೆ ನಡೆಯುತ್ತಿದೆ. ರಾಜ್ಯ ಸರ್ಕಾರದ ಏಕಪಕ್ಷೀಯ ನಡೆಯನ್ನು ಖಂಡಿಸುವ ಸಲುವಾಗಿ ಈ ಸಮಿತಿಯ ಮುಂದಿನ ಸಭೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಸಭಾ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

Exit mobile version