ವಿವಾದಾತ್ಮಕ ಟ್ವೀಟ್ ಹಿನ್ನಲೆ ನಟಿ ಕಂಗನಾ ಟ್ವಿಟ್ಟರ್ ಖಾತೆ ಅಮಾನತು

ಮುಂಬೈ, ಮೇ. 04: ನಟಿ ಕಂಗನಾ ರಣಾವತ್ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿದೆ. ಸಾಲು ಸಾಲು ವಿವಾದಾತ್ಮಕ ಟ್ವೀಟ್ ಮಾಡಿದ ಕಂಗನಾ ವಿರುದ್ಧ ಅನೇಕರು ರಿಪೋರ್ಟ್ ಮಾಡಿದ್ದರು. ಆ ಹಿನ್ನೆಲೆ ಕಂಗನಾ ಖಾತೆಯನ್ನ ಅಮಾನತು ಮಾಡಲಾಗಿದೆ. ಮೈಕ್ರೋ ಬ್ಲಾಗಿಂಗ್ ಸೈಟ್ ನಿಯಗಳಿಗೆ ವಿರುದ್ಧವಾಗಿ ಪದಗಳನ್ನು ಬಳಸಿ ಟ್ವೀಟ್ ಮಾಡುತ್ತಿದ್ದ ಕಾರಣ ಸಸ್ಪೆಂಡ್ ಮಾಡಲಾಗಿದೆ ಎಂದು ಕಾರಣ ನೀಡಲಾಗಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಪಶ್ಚಿಮ ಬಂಗಾಳದಲ್ಲಿ ಗೆಲುವಿನ ಕುರಿತು ಟೀಕಿಸಿದ ಕಂಗನಾ ಟ್ವೀಟ್​ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್​ಗೆ ಮನವಿ ಮಾಡಲಾಗಿತ್ತು. ಅವರ ಖಾತೆಯಲ್ಲಿ ದ್ವೇಷಪೂರಿತ ನಡುವಳಿಕೆ ಮತ್ತು ನಿಂದನಾತ್ಮಕ ಅಂಶಗಳು ಕಂಡು ಬಂದಿದ್ದು, ಪದೇ ಪದೇ ಟ್ವಿಟರ್​ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಟ್ವೀಟರ್​ ತಿಳಿಸಿದೆ.

ಟ್ವಿಟರ್​ ನಿಯಮ ಉಲ್ಲಂಘನೆ ಹಿನ್ನಲೆ ನಾವು ಈ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ದ್ವೇಷಪೂರಿತ ನಡವಳಿಕೆ ನೀತಿ ಮತ್ತು ನಿಂದನಾತ್ಮಕ ವರ್ತನೆಯ ಬಗ್ಗೆ ಈಗಾಗಲೇ ನಿಯಮಗಳನ್ನು ಸ್ಪಷ್ಟಪಡಿಸಲಾಗಿದ್ದು, ಇವು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಟ್ವಿಟರ್​ ವಕ್ತಾರರು ತಿಳಿಸಿದ್ದಾರೆ.

ಟ್ವೀಟರ್​ ಖಾತೆ ಅಮಾನತು ಮಾಡಿರುವ ಹಿನ್ನಲೆ ಇನ್ಸ್ಟಾಗ್ರಾಂ ಮೂಲಕ ನೋವು ಹೊರ ಹಾಕಿದ ನಟಿ ಇದು ಪ್ರಜಾಪ್ರಭುತ್ವದ ಕೊಲೆ ಎಂದಿದ್ದಾರೆ.

Exit mobile version