ನವದೆಹಲಿ, ಮೇ. 08: ದೇಶದಲ್ಲಿ ಸೋಂಕು ಹರಡುವಿಕೆ ಮೀತಿ ಮೀರಿದ್ದು, ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ಕಳೆದ ಬಾರಿ ಸೋಂಕು ನಿಯಂತ್ರಣಕ್ಕೆ ದೇಶವಿಡೀ ಲಾಕ್ಡೌನ್ ಘೋಷಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ಬಾರಿ ಸೋಂಕು ನಿಯಂತ್ರಣದ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ವಹಿಸಿದ್ದಾರೆ. ಈ ನಡುವೆ ಕೆಲ ರಾಜ್ಯಗಳಲ್ಲಿ ಸೋಂಕು ನಿಯಂತ್ರಣ ಮೀರಿ ಹರಡುತ್ತಿರುದ್ದು, ಸಾಕಷ್ಟು ಆತಂಕ ತಂದಿದೆ. ಇದೇ ಹಿನ್ನಲೆ ಸೋಂಕು ಹೆಚ್ಚಳಗೊಂಡಿರುವ ನಾಲ್ಕು ರಾಜ್ಯಗಳ ಕುರಿತು ಇಂದು ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತಮಿಳುನಾಡು ನೂತನ ಸಿಎಂ ಎಂ. ಕೆ ಸ್ಟಾಲಿನ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಣ್ ಮತ್ತು ಹಿಮಾಚಲ್ ಪ್ರದೇಶ ಸಿಎಂ ಜೈ ರಾಮ್ ಠಾಕೂರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ ಕೋವಿಡ್ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ದೇಶದಲ್ಲಿಯೇ ಅತಿಹೆಚ್ಚು ಸೋಂಕಿಗೆ ತುತ್ತಾಗಿದ್ದ ಮೊದಲ ರಾಜ್ಯ ಮಹಾರಾಷ್ಟ್ರ. ವಾಣಿಜ್ಯ ನಗರಿಯಲ್ಲಿ ಸೋಂಕು ಮಿತಿ ಮೀರಿದ ಹಿನ್ನಲೆ ರಾಜ್ಯದಲ್ಲಿ ಲಾಕ್ಡೌನ್ನಂತಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಉದ್ಧವ್ ಠಾಕ್ರೆ ಮುಂದಾಗಿದ್ದರು. ಅಲ್ಲಿನ ರಾಜ್ಯ ಸರ್ಕಾರ ಕೈ ಗೊಂಡ ಕ್ರಮದಿಂದಾಗಿ ಅಂಕೆ ಮೀರಿದ್ದ ಸೋಂಕು ಈಗ ನಿಯಂತ್ರಣಕ್ಕೆ ಬಂದಿದೆ. ಆದರೆ, ರಾಜ್ಯದಲ್ಲಿ ಹೊಸ ಸೋಂಕಿನ ಪ್ರಕರತ ಪತ್ತೆಯಾಗುವ ಬಗ್ಗೆ ಕೇಂದ್ರ ಸಚಿವರು ತಿಳಿಸಿದ್ದರು. ಈ ಹಿನ್ನಲೆ ಈ ಕುರಿತು ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಕೋವಿಡ್ ಲಸಿಕೆಗಾಗಿ ತಮ್ಮದೇ ಆದ ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸುವ ಬಗ್ಗೆ ಠಾಕ್ರೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಈ ಬಗ್ಗೆ ಕೂಡ ಮಾತುಕತೆ ನಡೆದಿದೆ.
ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಕುರಿತು ಮಧ್ಯ ಪ್ರದೇಶ ಸಿಎಂ ಕಾರ್ಯಕ್ಕೆ ಇದೇ ವೇಳೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕರ್ಫ್ಯೂ ಕುರಿತು ಚರ್ಚೆ ನಡೆಸಿದರು. ಈ ವೇಳೆ ರಾಜ್ಯಕ್ಕೆ ಬೇಕಾದ ಸಹಾಯದ ಕುರಿತು ಕೇಂದ್ರ ಭರವಸೆ ನೀಡಿದೆ.
ಹಿಮಾಚಲ ಪ್ರದೇಶದಲ್ಲಿ ಆಕ್ಸಿಜನ್ ಪೂರೈಕೆ ಮತ್ತು ಲಸಿಕೆ ವಿತರಣೆ ಕಾರ್ಯದ ಕುರಿತು ಪ್ರಧಾನಿ ಮೋದಿ ಮಾಹಿತಿ ಪಡೆದರು. ಸೋಂಕಿನ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ಬೇಕಾದ ನೆರವನ್ನು ನೀಡುವುದಾಗಿ ಪ್ರಧಾನಿ ಮೋದಿ ಆಶ್ವಾಸನೆ ನೀಡಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಸೋಂಕು ನಿಯಂತ್ರಣಕ್ಕೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೂಡ ಪ್ರಧಾನಿ ಮೋದಿ ವಿವರಣೆ ಪಡೆದರು