ಚೀನಾದಲ್ಲಿ ಮತ್ತೆ ಅಬ್ಬರಿಸುತ್ತಿರವ ಕೊರೊನಾ

ಬೀಜಿಂಗ್ ಅ 27 : ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಚೀನಾದ   .ವಾಯುವ್ಯ ಪ್ರಾಂತ್ಯದ ಗನ್ಸುವಿನ ಪ್ರಾಂತೀಯ ರಾಜಧಾನಿಯಾದ ಲ್ಯಾಂಝೌನಲ್ಲಿ ಕಠಿಣ ಲಾಕ್ ಡೌನ್‌ ಜಾರಿಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ತಾಕೀತು ಮಾಡಲಾಗಿದೆ.

ರಾಜಧಾನಿ ಬೀಜಿಂಗ್‌ನಲ್ಲೂ ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗಿದ್ದು, ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ ನಗರವಾಸಿಗಳು ತುರ್ತು ಸಂದರ್ಭ ಹೊರತುಪಡಿಸಿ ನಗರದಿಂದ ಹೊರಗೆ ಹೋಗಬಾರದು ಎಂದು ತಿಳಿಸಲಾಗಿದೆ. ವೈರಸ್ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಜನರ ಪರೀಕ್ಷೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.

ಚೀನಾದಲ್ಲಿ ಕಳೆದ ಒಂದೇ ವಾರದಲ್ಲಿ 11ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ 100ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅದರ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿ ಲಾಕ್​ಡೌನ್​ ಜಾರಿಯಾಗುತ್ತಿದೆ. ಅಕ್ಟೋಬರ್​ 17ರಿಂದ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಅಷ್ಟೇ ಅಲ್ಲ ತುಂಬ ವೇಗವಾಗಿ ಪ್ರಸರಣ ಆಗುತ್ತಿವೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್​ ತಿಳಿಸಿದ್ದಾರೆ. ಇದಿಷ್ಟಕ್ಕೇ ಮುಗಿಯುವುದಿಲ್ಲ. ಮತ್ತೊಮ್ಮೆ ಚೀನಾದಲ್ಲಿ ಸೋಂಕಿನ ಅಟ್ಟಹಾಸ ಹೆಚ್ಚಾಗುವ ಸಾಧ್ಯತೆ ಜಾಸ್ತಿ ಇದೆ ಎಂದೂ ತಿಳಿಸಿದ್ದಾರೆ. ಇದರೊಂದಿಗೆ ಆರೋಗ್ಯ ಸಿಬ್ಬಂದಿಯೂ ಕೂಡ ಕೊರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.

Exit mobile version