ಸರ್ಕಾರಿ ನೌಕರರ ಒಂದು ತಿಂಗಳ ವೇತನಕ್ಕೆ ಸರ್ಕಾರದ ಕತ್ತರಿ: ಸತ್ಯಕ್ಕೆ ದೂರವಾದ ಸಂಗತಿ ಎಂದು ಸರ್ಕಾರಿ ನೌಕರರ ಸಂಘ ಸ್ಪಷ್ಟನೆ

ಬೆಂಗಳೂರು, ಏ. 27: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರ ಒಂದು ತಿಂಗಳ ವೇತನ ತಡೆಹಿಡಿಯಬೇಕೆಂಬ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎನ್ನಲಾದ ನಿರ್ಧಾರ ಸತ್ಯಕ್ಕೆ ದೂರವಾದದ್ದು ಎಂದು ಸರ್ಕಾರಿ ನೌಕರರ ಸಂಘ ಸ್ಪಷ್ಟಪಡಿಸಿದೆ.

ಕೊರೊನಾ ಮಹಾಮಾರಿಯ ಎರಡನೇ ಅಲೆಯಿಂದ ರಾಜ್ಯದಲ್ಲಿ ಉಂಟಾಗಿರುವ ತೊಂದರೆ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕಡಿತಗೊಳಿಸಿ ಆ ಹಣವನ್ನು ಆರೋಗ್ಯ ಇಲಾಖೆಗೆ ಬಳಸಿಕೊಳ್ಳುವ ಕುರಿತು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂಬ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡಿತ್ತು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ರಾಜ್ಯದ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಹಿಡಿಯುವ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದೆ ಎಂಬ ವಿಷಯ ರಾಜ್ಯದ ಸರ್ಕಾರಿ ನೌಕರರನ್ನು ಗೊಂದಲಕ್ಕಿಡುಮಾಡಿರುವ ವಿಷಯ ತಿಳಿದಿದೆ.

ರಾಜ್ಯ ಸರ್ಕಾರಗಳು ಈ ರೀತಿಯಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಸಂಪ್ರದಾಯದಂತೆ ರಾಜ್ಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ತೀರ್ಮಾನಗಳನ್ನು ಈ ಹಿಂದೆ ತೆಗೆದುಕೊಂಡಿರುತ್ತದೆ. ಆದರೆ ಈ ಕ್ಷಣದವರೆಗೂ ಆ ರೀತಿಯ ಯಾವುದೇ ಚರ್ಚೆಗಳನ್ನು ಸರ್ಕಾರ ಸಂಘದೊಂದಿಗೆ ನಡೆಸಿಲ್ಲ.

ಹಾಗಾಗಿ ಇಂದು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕಟಾವು ಮಾಡುತ್ತೇವೆ ಎಂಬ ಅಂಶ ಸತ್ಯಕ್ಕೆ ದೂರವಾದದ್ದು ಹಾಗೂ ಗಾಳಿ ಸುದ್ದಿ ಎಂಬ ವಿಷಯವನ್ನು ಸಮಸ್ತ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ತಿಳಿಸುತ್ತದೆ ಹಾಗೂ ಯಾವುದೇ ಸರ್ಕಾರಿ ನೌಕರರು ಗೊಂದಲಕ್ಕೀಡಾಗಬಾರದೆಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version