ದೇಶದಲ್ಲಿ ಶುರುವಾಯಿತು ಕೊರೊನಾ ಅಬ್ಬರ: 24 ಗಂಟೆಗಳಲ್ಲಿ 47,262 ಹೊಸ ಪ್ರಕರಣಗಳು ಪತ್ತೆ

ಬೆಂಗಳೂರು, ಮಾ.24: ದೇಶದಲ್ಲಿ ಕೊರೊನಾ ಹೊಸ ಅಲೆಯ ಆರ್ಭಟ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ 47,262 ಹೊಸ ಪ್ರಕರಣಗಳು ಕಂಡುಬಂದಿದ್ದು, 275 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಇಲ್ಲಿಯವರಿಗೆ ಸೋಂಕಿತರ ಸಂಖ್ಯೆ 1,17,34,058 ಕ್ಕೆ ಏರಿಕೆಯಾಗಿದೆ. 1,60,441 ಮಂದಿ ಸಾವಿಗೀಡಾಗಿದ್ದಾರೆ.
1,12,05,160 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ 3,68,457 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

ಈ ನಡುವೆ ದೇಶಾದ್ಯಂತ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಇದರ ನಡುವೆಯೂ ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದ್ದು, ಮತ್ತೊಮ್ಮೆ ಲಾಕ್ ಡೌನ್ ಆಗುವ ಭೀತಿ ಸಹ ಶುರುವಾಗಿದೆ.

ಇನ್ನೂ ಕರ್ನಾಟಕದಲ್ಲೂ ಕೊರೊನಾ ರಣಕೇಕೆ ಹಾಕುತ್ತಿದ್ದು, ಕಳೆದ ಕೆಲವು ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಮುಖ್ಯವಾಗಿ ಬೆಂಗಳೂರು, ಕಲ್ಬುರ್ಗಿ, ಮೈಸೂರು ಹಾಗೂ ಇತರೆ ಐದು ಜಿಲ್ಲೆಗಳಲ್ಲಿ ಕೋವಿಡ್-19 ಎರಡನೇ ಅಲೆಯ ಆರ್ಭಟ ಜೋರಾಗಿದೆ. ಹೀಗಾಗಿ ಈ ಎಂಟು ಜಿಲ್ಲೆಗಳಲ್ಲಿ ಲಾಕ್ ಡೌನ್ ಆಗುವ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಇನ್ನೂ ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗಿರುವ ಪರಿಣಾಮ ಸರ್ಕಾರ ಕೂಡ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಹೊರ ರಾಜ್ಯಗಳಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ, ಮಹಾರಾಷ್ಟ್ರ, ಕೇರಳ, ಚಂಡಿಗಢ, ಪಂಜಾಬ್​ನಿಂದ ಬರುವ ಪ್ರಯಾಣಿಕರಿಗೆ RTPCR ಟೆಸ್ಟ್ ಕಡ್ಡಾಯ, ಪ್ರಯಾಣದ 72 ಗಂಟೆ ಒಳಗಿನ ರಿಪೋರ್ಟ್​ ಕಡ್ಡಾಯ, ರೈಲ್ವೇ ನಿಲ್ದಾಣ, ಬಸ್​ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಪರಿಶೀಲನೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

Exit mobile version