ದೇಶಾದ್ಯಂತ ಮುಂಗಾರು ಜೋರು, ಹೈ ಅಲರ್ಟ್

ಮುಂಬೈ, ಜೂ. 12: ದೇಶಾದ್ಯಂತ ಮುಂಗಾರು ಮಳೆ ಜೋರಾಗಿದ್ದು, ವಾಣಿಜ್ಯ ನಗರಿ ಮುಂಬೈ ಥಂಡಾ ಹೊಡೆಯುತ್ತಿದೆ. ಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಮಳೆ ಉತ್ತಮವಾಗಿದ್ದು, ದಕ್ಷಿಣದಲ್ಲಿ ಆರಂಭವಾಗಿ ಪೂರ್ವ ಭಾರತ ಮತ್ತು ಮಧ್ಯ ಭಾರತದ ಸುತ್ತಮುತ್ತ ಬಿರುಬೀಸುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಭಾರತದ ಪೂರ್ವ-ಮಧ್ಯ ಭಾಗದಲ್ಲಿ ಮತ್ತು ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ಚಂಡಮಾರುತಗಳ ಸುಳಿ ಎದ್ದಿದ್ದು, ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್​ಗಢ ರಾಜ್ಯಗಳಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಲಿದೆ.

ಇನ್ನು ಮುಂಗಾರು ತವರು ಕೇರಳದಲ್ಲಿ ಜೂನ್​ 11- 15 ರ ಮಧ್ಯೆ ಭಾರೀ ಮಳೆಯಾಗಲಿದೆ. ಕೊಂಕಣ ಭಾಗದಲ್ಲಿ ಮತ್ತು ಗೋವಾದಲ್ಲಿಯೂ ಮಳೆಯಾಗಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ.

ಜತೆಗೆ ಉತ್ತರ ಪ್ರದೇಶ ಅನೇಕ ಜಿಲ್ಲೆಗಳಲ್ಲಿ ಇನ್ನೇನು ಮಳೆ ಶುರುವಾಗಲಿದೆ. ಸಿಕ್ಕಿಂ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ತೆಲಂಗಾಣದವರೆಗೂ ವಾಯುಭಾರ ಕುಸಿತದ ಪ್ರಭಾವ ಬೀರಲಿದೆ. ಇದರಿಂದ ಈಗಾಗಲೇ ಮಳೆ ಬೀಳುತ್ತಿದ್ದು, ಮುಂದೆ ಹೆಚ್ಚಾಗಲಿದೆ.

ಬಿಹಾರ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮುಂಗಾರು ಮಳೆ ಬೀಳಲಿದೆ. ನಾಳೆ, ನಾಳಿದ್ದು ಈ ಮೂರೂ ರಾಜ್ಯಗಳಲ್ಲಿ ಮುಂಗಾರು ಅರ್ಭಟ ಜೋರಾಗಿರಲಿದೆ.

Exit mobile version