ಚುನಾವಣೆಗೆ ತೋರುವ ಆಸಕ್ತಿ ಕೋವಿಡ್ ನಿಯಂತ್ರಣಕ್ಕೆ ತೋರುತ್ತಿಲ್ಲ: ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಏ. 17: ಕೋವಿಡ್ ನಿಯಮ ಪಾಲನೆ ಮಾಡುವಂತೆ ಬಿಜೆಪಿ ನಾಯಕರು ಜನರಿಗೆ ಬೋಧಿಸುತ್ತಿದ್ದಾರೆ. ಆದರೆ, ಅವರೇ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು,‌ ಬಿಜೆಪಿ ನಾಯಕರು ಆಡಳಿತಕ್ಕಿಂತಲೂ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಕೋವಿಡ್ 2ನೇ ಅಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯವನ್ನು ಬಹಿರಂಗಗೊಳಿಸಿದೆ.

ಕೋವಿಡ್ ಮೊದಲನೇ ಅಲೆಯಲ್ಲಿ ಆದ ಅನುಭವದಿಂದ ಸರ್ಕಾರ ಪಾಠ ಕಲಿತಿಲ್ಲ. ಜನ ಕೋವಿಡ್’ಗೆ ಚಿಕಿತ್ಸೆ ಸಿಗದೆ ಅಸಹಾಯಕರಾಗಿದ್ದಾರೆ. ಕೋವಿಡ್‍ಗೆ ಚಿಕಿತ್ಸೆ ನೀಡಲು ಬಳಸುವ ರೆಮ್ಡಿಸಿವಿರ್ ಕೊರತೆ ಕಾಡುತ್ತಿದೆ. ಔಷಧಿಗಳ ಕೊರತೆಯನ್ನು ನಿಭಾಯಿಸಲು ಸರ್ಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕೋವಿಡ್ ಸೋಂಕಿತರಿಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಐಸಿಯು ಬೆಡ್‍’ಗಳ ಕೊರತೆ ಇದೆ. ಆಮ್ಲಜನಕ ಹಾಗೂ ಇತರ ಜೀವ ರಕ್ಷಕ ಸೌಲಭ್ಯಗಳಿಲ್ಲದೆ ಜನ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಜನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ. ಅಲ್ಲಿ ವಿಧಿಸಲಾಗುವ ಶುಲ್ಕವನ್ನು ಭರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಕೊರೊನಾ ಸೋಂಕಿಗೆ ಸಿಲುಕಿದ ಎಲ್ಲರಿಗೂ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Exit mobile version