KRS ಡ್ಯಾಂನಲ್ಲಿ ಬಿರುಕು ವಿಚಾರ; ಕೇಂದ್ರದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನ ಭೇಟಿಯಾದ ಸಂಸದೆ ಸುಮಲತಾ

ಹೊಸದಿಲ್ಲಿ, ಜು. 20: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ KRS ಡ್ಯಾಂ ಬಿರುಕು ವಿಚಾರ‌ ಇದೀಗ ದೆಹಲಿ ತಲುಪಿದೆ. ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಹೇಳಿಕೆ ನೀಡಿದ್ದ‌ ಮಂಡ್ಯ ಸಂಸದೆ ಸುಮಲತಾ ಅಂಬರೀಶ್,‌ KRS ಅಣೆಕಟ್ಟು ವಿಚಾರದ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದಾರೆ.

ಸಂಸತ್‌ ಅಧಿವೇಶನದ ಹಿನ್ನೆಲೆ ದೆಹಲಿಗೆ ತೆರಳಿರುವ ಸುಮಲತಾ ಅಂಬರೀಶ್, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನ ಭೇಟಿಯಾಗಿ KRS ಡ್ಯಾಂ ಬಿರುಕಿನ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಡ್ಯಾಂ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್ ಅಣೆಕಟ್ಟೆಗೆ ತೊಂದರೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಶತಮಾನದ ಇತಿಹಾಸವಿರುವ KRS ಅಣೆಕಟ್ಟೆಯನ್ನು ಸಂರಕ್ಷಿಸಲು ಜಲ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಈ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸುವಂತೆಯೂ ಸಹ ಒತ್ತಯಿಸಿದ್ದಾರೆ. ಈ ಕುರಿತಂತೆ ಸುಮಲತಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

KRS ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ಹೇಳಿಕೆ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್, ಈ ವಿಚಾರಕ್ಕೆ ಸಂಬಂಧಿಸಿದಂತೆ ಖುದ್ದು ಕೆ.ಆರ್.ಎಸ್ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ‌ ನಡೆಸಿ, ಅಧಿಕಾರಿಗಳಿಂದ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಅಲ್ಲದೇ ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸ್ಥಳಗಳಿಗೂ ಸಹ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದರು. ಸುಮಲತಾ ಅವರ‌ ಈ ನಡೆ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.

Exit mobile version