ವಿಂಡೀಸ್‌ ವಿರುದ್ದ ಭಾರತಕ್ಕೆ ಸುಲಭ ಜಯ

cricket

ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಬೃಹತ್‌ ಗೆಲುವು ಸಾಧಿಸಿದೆ. ಈ ಮೂಲಕ ಏಕದಿನ ಇತಿಹಾಸದಲ್ಲಿ ಭಾರತ ಆಡಿದ 1000ನೇ ಪಂದ್ಯದಲ್ಲಿ ಆಡಿದ ಭಾರತ ಈ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡು ಸ್ಮರಣೀಯವಾಗಿಸಿದೆ. 1000 ಏಕದಿನ ಪಂದ್ಯವನ್ನಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ಭಾರತ ಪಡೆದುಕೊಂಡಿದೆ.

ವಿಶ್ವದ ಅತೀದೊಡ್ಡ ಕ್ರಿಕೆಟ್ ಮೈದಾನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಯಜುವೇಂದ್ರ ಚಾಹಲ್ ಹಾಗೂ ವಾಷಿಂಗ್ಟನ್ ಸುಂದರ್ (30ಕ್ಕೆ 3) ದಾಳಿಗೆ ಬೆದರಿದ ಪ್ರವಾಸಿ ತಂಡ 43.5 ಓವರ್ ಗಳಲ್ಲಿ ಕೇವಲ 176 ರನ್ ಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ನಾಯಕ ರೋಹಿತ್ ಶರ್ಮ (Rohit Sharma) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 28 ಓವರ್ ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿ ಗೆಲುವು ಕಂಡಿತು. ಉಭಯ ದೇಶಗಳ ನಡುವೆ 2ನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಬುಧವಾರ ನಡೆಯಲಿದೆ.
ಚಹಾಲ್‌ ನೂತನ ದಾಖಲೆ : ಟೀಂ ಇಂಡಿಯಾ ಸ್ಪಿನ್ನರ್ ಯಜ್ವೇಂದ್ರ ಚಹಾಲ್ ಏಕದಿನ ಪಂದ್ಯದಲ್ಲಿ 100 ವಿಕೆಟ್ ಗಳ ಮೈಲುಗಲ್ಲು ದಾಟಿದ್ದಾರೆ. ವಿಂಡೀಸ್ ವಿರುದ್ಧದ ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಿಕೋಲಸ್ ಪೂರನ್ ಅವರನ್ನು ಔಟ್ ಮಾಡುವ ಮೂಲಕ ಚಹಾಲ್ ಈ ಸಾಧನೆ ಮಾಡಿದರು. ಮತ್ತೊಂದೆಡೆ, ಚಹಾಲ್ ಕೇವಲ 60 ಏಕದಿನ ಪಂದ್ಯಗಳಲ್ಲಿ 100 ವಿಕೆಟ್‌ಗಳ ಮೈಲಿಗಲ್ಲು ಸಾಧಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಪರ ಅತಿ ಕಡಿಮೆ ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಚಹಾಲ್ ಪಾತ್ರರಾದರು.

ಭಾರತಕ್ಕೆ ಆಸರೆಯಾದ ರೋಹಿತ್ : ಸುಲಭ ಗುರಿ ಬೆಂಬತ್ತಿದ ಭಾರತ ತಂಡಕ್ಕೆ ರೋಹಿತ್ ಶರ್ಮ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್ ಗೆ 84 ರನ್ ಪೇರಿಸಿ ಭರ್ಜರಿ ಆರಂಭ ನೀಡಿದರು. ರೋಹಿತ್ 51 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 60 ರನ್ ಗಳಿಸಿದರೆ, ಕಿಶನ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 28 ರನ್ ಬಾರಿಸಿದರು.

ಈ ಹಂತದಲ್ಲಿ 4 ವಿಕೆಟ್ ಅನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಕೊಹ್ಲಿ ಮೊದಲೆರಡು ಎಸೆತಗಳಲ್ಲಿ ಬೌಂಡರಿ ಬಾರಿಸಿ ನಿರ್ಗಮಿಸಿದರೆ, ರಿಷಭ್ ಪಂತ್ ರನೌಟ್ ಆಗಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಸೂರ್ಯಕುಮಾರ್ (ಅಜೇಯ 34) ಮತ್ತು ಚೊಚ್ಚಲ ಪಂದ್ಯವಾಡಿದ ದೀಪಕ್ ಹೂಡಾ (ಅಜೇಯ 26) ಮುರಿಯದ 5ನೇ ವಿಕೆಟ್ ಗೆ 68 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವೆಸ್ಟ್ ಇಂಡೀಸ್ ಪರ ಅಲ್ಜಾರಿ ಜೋಸೆಫ್ 2, ಅಕೀಲ್ ಹುಸೇನ್ 1 ವಿಕೆಟ್ ಗಳಿಸಿದರು.

Exit mobile version