ಸಿಡ್ನಿ, ಜ. 05: ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ ಕೆ.ಎಲ್. ರಾಹುಲ್, ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ.
ನಾಲ್ಕು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆಲ್ಲುವ ಮೂಲಕ 1-1ರ ಸಮಬಲ ಸಾಧಿಸಿವೆ. ಈ ನಡುವೆ ಜ.7 ರಿಂದ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯಕ್ಕಾಗಿ ಎರಡೂ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಈ ಹಿನ್ನೆಲೆಯಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಂಭಾವ್ಯ 11 ಆಟಗಾರರ ಬಳಗದಲ್ಲಿ ಕೆ.ಎಲ್. ರಾಹುಲ್ ಸ್ಥಾನ ಪಡೆಯುವ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಅಭ್ಯಾಸದ ವೇಳೆ ಗಾಯದ ಸಮಸ್ಯೆಗೆ ತುತ್ತಾದ ರಾಹುಲ್, ಇದೀಗ ಸರಣಿಯಿಂದ ಹೊರಗುಳಿದಿದ್ದಾರೆ.
ಈ ಬಗ್ಗೆ ಮಂಗಳವಾರ ಪ್ರಕಟಣೆ ಹೊರಡಿಸಿರುವ ಬಿಸಿಸಿಐ, ಭಾರತ ತಂಡದ ಅಭ್ಯಾಸದ ಸಂದರ್ಭ ಕೆ.ಎಲ್. ರಾಹುಲ್ ಅವರ ಎಡಗೈ ಮಣಿಕಟ್ಟಿಗೆ ಗಾಯವಾಗಿದ್ದು ಅವರು ಸಂಪೂರ್ಣವಾಗಿ ಚೇತರಿಕೆ ಕಾಣಲು ಮೂರು ವಾರಗಳು ಬೇಕಾಗುತ್ತದೆ. ಹಾಗಾಗಿ ಅವರು ಉಳಿದೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ತಿಳಿಸಿದೆ.