ಕೊರೊನಾ ಹೊಡೆತಕ್ಕೆ ಕೊಚ್ಚಿಹೋದ ಕ್ರಿಕೆಟ್‌ ಅಬ್ಬರ: ಐಪಿಎಲ್‌ 14ನೇ ಆವೃತ್ತಿ ರದ್ದುಗೊಳಿಸಿ ಬಿಸಿಸಿಐ ಅಧಿಕೃತ ಆದೇಶ

ಮುಂಬೈ, ಮೇ. 04; ಮಹಾಮಾರಿ ಕೊರೊನಾ ಹೊಡೆತಕ್ಕೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 14ನೇ ಆವೃತ್ತಿ ರದ್ದಾಗಿದ್ದು, ಹಲವು ಆಟಗಾರರಿಗೆ ಕೊರೊನಾ ಹಿನ್ನೆಲೆಯಲ್ಲಿ ಐಪಿಎಲ್​ 14ನೇ ಆವೃತ್ತಿ ಪಂದ್ಯಾವಳಿಯನ್ನು ಮುಂದಿನ ಆದೇಶದವರೆಗೆ ಐಪಿಎಲ್ ರದ್ದುಗೊಳಸಿ ಬಿಸಿಸಿಐನಿಂದ ಅಧಿಕೃತ ಮಾಹಿತಿ ಹೊರಡಿಸಿದೆ.

ಕಳೆದೊಂದು ತಿಂಗಳಿಂದ ನಡೆಯುತ್ತಿದ್ದ ಐಪಿಎಲ್‌ 14ನೇ ಆವೃತ್ತಿಗೆ ಕೊರೊನಾ ಸಂಕಷ್ಟ ಎದುರಾಗಿದ್ದು, ಪ್ರಸಕ್ತ ಸೀಸನ್‌ನಲ್ಲಿ ಪಾಲ್ಗೊಂಡಿದ್ದ ಹಲವು ಆಟಗಾರರು ಮಹಾಮಾರಿಗೆ ತುತ್ತಾಗಿರುವುದು ಎಲ್ಲಾ ಫ್ರಾಂಚೈಸಿಗಳಲ್ಲಿ ಆತಂಕ ಮೂಡಿಸಿತ್ತು.

ನಿನ್ನೆಯಷ್ಟೇ ಕೊಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಇಬ್ಬರು ಆಟಗಾರರು ಕೊರೊನಾ ಸೋಂಕಿಗೆ ತುತ್ತಾಗಿರುವ ಬೆನ್ನಲ್ಲೇ ಇಂದು ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡದ ವಿಕೆಟ್‌ ಕೀಪರ್‌ ವೃದ್ದಿಮಾನ್‌ ಸಾಹ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ವೃದ್ಧಿಮಾನ್‌ ಸಾಹ ಅವರಿಗೆ ಕೊರೊನಾ ಪಾಸಿಟಿವ್‌ ಬರುತ್ತಿದ್ದಂತೆ ತಂಡದ ಇತರೆ ಆಟಗಾರರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿತ್ತು. ಅಲ್ಲದೇ ದೆಹಲಿ ಕ್ಯಾಪಿಟಲ್ಸ್‌ ತಂಡದ ಅಮಿತ್‌ ಮಿಶ್ರಾ ಅವರಿಗೆ ಸಹ ಕೊರೊನಾ ಸೋಂಕು ದೃಢಪಟ್ಟಿತ್ತು.

ಈ ಎಲ್ಲಾ ಬೆಳವಣಿಗೆಗಳು ಟೂರ್ನಿಯ ಎಲ್ಲಾ ಎಂಟು ತಂಡಗಳ ಆಟಗಾರರು ಹಾಗೂ ಫ್ರಾಂಚೈಸಿ ಮಾಲೀಕರಲ್ಲಿ ಗೊಂದಲು ಮೂಡಿಸಿತ್ತು. ಈ ನಡುವೆ ಇಡೀ ಪಂದ್ಯಾವಳಿಯನ್ನು ಮುಂಬೈ ನಗರದಲ್ಲಿ ನಡೆಸುವ ಬಗ್ಗೆಯೂ ಚಿಂತನೆ ನಡೆದಿತ್ತು ಎನ್ನಲಾಗಿದೆ. ಆದರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಇಡೀ ಪಂದ್ಯಾವಳಿಯನ್ನು ರದ್ದುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಿದೆ ಎನ್ನಲಾಗಿದೆ.

Exit mobile version