ಹೊಸದಿಲ್ಲಿ, ಮೇ. 07: ಭಾರತ ಕ್ರಿಕೆಟ್ ತಂಡದ ಆಟಗಾರ ಗಬ್ಬರ್ ಖ್ಯಾತಿಯ ಶಿಖರ್ ಧವನ್ ಕೋವಿಡ್ ಲಸಿಕೆಯ ಮೊದಲ ಡೋಸ್ ಲಸಿಕೆ ಪಡೆದರು.
ಲಸಿಕೆ ಪಡೆಯುತ್ತಿರುವ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ʻಕೋವಿಡ್ ಸಾಂಕ್ರಾಮಿಕ ಉಲ್ಬಣಿಸುತ್ತಿರುವ ಈ ಹಂತದಲ್ಲಿ ಅದನ್ನು ಮಣಿಸಲು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದʼ ಎಂದು ಪೋಸ್ಟ್ ಮಾಡಿದ್ದಾರೆ.
ಕೋವಿಡ್ ಲಸಿಕೆ ಪಡೆದ ಟೀಂ ಇಂಡಿಯಾ ತಂಡದ ಮೊದಲ ಆಟಗಾರ ಶಿಖರ್ ಧವನ್ ಆಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಾವಳಿ ಮುಂದೂಡಿದ ಹಿನ್ನೆಲೆಯಲ್ಲಿ ಶಿಖರ್ ಧವನ್, ನಿನ್ನೆಯಷ್ಟೇ ದೆಹಲಿಗೆ ಮರಳಿದ್ದರು. ಅಲ್ಲದೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಉಂಟಾಗಿರುವ ಆಕ್ಸಿಜನ್ ಕೊರತೆ ನೀಗಿಸುವ ಸಲುವಾಗಿ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದರು.