ಐಪಿಎಲ್‌ಗೂ ತಟ್ಟಿದ ಮ್ಯಾಚ್ ಫಿಕ್ಸಿಂಗ್ ಕಂಟಕ

ದುಬೈ ಸೆ 23 : ಪಂಜಾಬ್‌ ಕಿಂಗ್ಸ್‌ನ ಆಲ್ರೌಂಡರ್‌ ದೀಪಕ್‌ ಹೂಡಾ ಪಂದ್ಯದ ದಿನದಂದು ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿ ವಿವಾದಕ್ಕೆ ಸಿಲುಕಿದ್ದಾರೆ. ಅವರ ಪೋಸ್ಟ್‌ನಿಂದಾಗಿ ಈಗ ಐಪಿಎಲ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆದಿದೆಯೇ ಎನ್ನುವ ಶಂಕೆ ಶುರುವಾಗಿದ್ದು, ಬಿಸಿಸಿಐ ತನಿಖೆ ನಡೆಸಲು ಮುಂದಾಗಿದೆ. ಮಂಗಳವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಮಧ್ಯಾಹ್ನ 2 ಗಂಟೆ ವೇಳೆಗೆ ಹೂಡಾ, ತಾವು ಹೆಟ್ಮೆಲ್‌ ಧರಿಸಿ ಬ್ಯಾಟ್‌ ಮಾಡಲು ಸಿದ್ಧರಾಗುತ್ತಿರುವ ಫೋಟೋವನ್ನು ‘ಪಂದ್ಯಕ್ಕೆ ರೆಡಿ’ ಎನ್ನುವ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿದ್ದರು. ಈ ಚಿತ್ರ ಬುಕ್ಕಿಗಳಿಗೆ ತಂಡದ ಆಂತರಿಕ ವಿಚಾರಗಳನ್ನು ತಿಳಿಸುತ್ತಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ ಹೆಚ್ಚಾಗಿ ಆನ್‌ಲೈನ್‌ನಲ್ಲೇ ಬುಕ್ಕಿಗಳು ಆಟಗಾರರನ್ನು ಸಂಪರ್ಕಿಸಿ ಫಿಕ್ಸಿಂಗ್‌ಗೆ ಮನವೊಲಿಸುತ್ತಿರುವ ಹಿನ್ನೆಲೆಯಲ್ಲಿ ಹೂಡಾ ಅವರ ಈ ಇನ್‌ಸ್ಟಾಪೋಸ್ಟ್‌ ವಿವಾದಕ್ಕೆ ಕಾರಣವಾಗಿದೆ.

 ಅಷ್ಟೇ ಅಲ್ಲದೆ 19.5ನೇ ಓವರ್‌ನಲ್ಲಿ ಯಾವುದೇ ರನ್ ಬಾರಿಸದೇ 2 ಎಸೆತಗಳನ್ನು ಎದುರಿಸಿ ಔಟ್ ಆದ ದೀಪಕ್ ಹೂಡಾ ತಂಡವನ್ನು ಗೆಲ್ಲಿಸುವ ಯಾವುದೇ ಪ್ರಯತ್ನವನ್ನು ಕೂಡ ಮಾಡಲಿಲ್ಲ. ಹೀಗಾಗಿ ದೀಪಕ್ ಹೂಡಾ ಕುರಿತು ಇದೀಗ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು ಆ್ಯಂಟಿ ಕರಪ್ಷನ್ ಯೂನಿಟ್ ಶೀಘ್ರದಲ್ಲಿಯೇ ದೀಪಕ್ ಹೂಡ ಕುರಿತಾಗಿ ವಿಚಾರಣೆ ನಡೆಸಲಿದೆ. ಇದರ ಜೊತೆಗೆ ಕೊನೆಯ 12 ಎಸೆತಗಳಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 8 ರನ್ ಬೇಕಿತ್ತು, ಈ ಸಮಯದಲ್ಲಿ 19ನೇ ಓವರ್ ಬೌಲಿಂಗ್ ಮಾಡಿದ ಮುಸ್ತಫಿಜರ್ ರಹಮಾನ್ 18.2 ಹಾಗೂ 18.3 ಎಸೆತಗಳನ್ನು ನೋಬಾಲ್ ಹಾಕಿದ್ದರು, ಆದರೂ ಸಹ ತೀರ್ಪುದಾರರು ಈ 2 ಎಸೆತಗಳನ್ನು ನೋಬಾಲ್ ಎಂದು ಪರಿಗಣಿಸಲಿಲ್ಲ ಎಂಬ ಗಾಢವಾದ ಆರೋಪ ಇದೀಗ ಕೇಳಿಬಂದಿದೆ.

Exit mobile version