4ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆದ ಚೆನ್ನೈ

 ದುಬೈ, . 15: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 2021ರ ಐಪಿಎಲ್ ಚಾಂಪಿಯನ್ ಆಗಿದೆ. ಫ್ಯಾಫ್ ಡುಪ್ಲೆಸಿ ಅವರ ಅಮೋಘ ಬ್ಯಾಟಿಂಗ್ ಹಾಗೂ ಚೆನ್ನೈ ಬೌಲಿಂಗ್ ಪಡೆಯ ಅದ್ಭುತ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಫೈನಲ್​ನಲ್ಲಿ ಕೆಕೆಆರ್ ತಂಡವನ್ನು 27 ರನ್​ಗಳಿಂದ ಸುಲಭವಾಗಿ ಮಣಿಸಿತು. ಗೆಲ್ಲಲು 193 ರನ್​ಗಳ ಬೃಹತ್ ಮೊತ್ತದ ಗುರಿಗೆ ಪ್ರತಿಯಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಇನ್ನಿಂಗ್ಸ್ 165 ರನ್​ಗೆ ಅಂತ್ಯಗೊಂಡಿತು. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಂತಾಗಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 3 ವಿಕೆಟ್ ಕಳೆದುಕೊಂಡು 192 ರನ್‌ಗಳನ್ನು ಗಳಿಸಿದೆ. ಈ ಪಂದ್ಯದಲ್ಲಿಯೂ ಸಿಎಸ್‌ಕೆ ಪರವಾಗಿ ಆರಂಭಿಕ ಜೋಡಿಯಿಂದ ಉತ್ತಮ ಕೊಡುಗೆ ದೊರೆಯಿತು. ಅದರಲ್ಲೂ ಅನುಭವಿ ಫಾಫ್ ಡು ಪ್ಲೆಸಿಸ್ 59 ಎಸೆತಗಳಲ್ಲಿ 86 ರನ್‌ಗಳನ್ನು ಗಳಿಸಿ ಕೊನೆಯ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು.

ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 32 ರನ್‌ಗಳಿಸಿದರೆ ರಾಬಿನ್ ಉತ್ತಪ್ಪ 15 ಎಸೆತಗಳಲ್ಲಿ 31 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಆಲ್‌ರೌಂಡರ್ ಮೊಯೀನ್ ಅಲಿ 20 ಎಸೆತಗಳಲ್ಲಿ 37 ರನ್‌ಗಳಿಸಿದ್ದಾರೆ. ಈ ಮೂಲಕ ತಂಡದ ಮೊದಲ ಇನ್ನೂರರ ಸನಿಹಕ್ಕೆ ಬರಲು ಕಾರಣರಾದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಕೆಕೆಆರ್‌ನ ಆರಂಭಿಕ ಜೋಡಿಯಾದ ಶುಬ್ಮನ್ ಗಿಲ್ ಹಾಗೂ ವೆಂಕಟೇಶ್ ಐಯ್ಯರ್ ಜೋಡಿ 91 ರನ್‌ಗಳ ಕೊಡುಗೆಯನ್ನು ನೀಡಿದರು. ಇಬ್ಬರು ಆಟಗಾರರು ಕೂಡ ಅರ್ಧ ಶತಕದ ಕೊಡುಗೆ ನೀಡಿದರು. ಆದರೆ ಈ ಜೋಡಿಯನ್ನು ಹೊರತುಪಡಿಸಿದರೆ ಕೆಕೆಆರ್ ಪರವಾಗಿ ಯಾವ ಬ್ಯಾಟ್ಸ್‌ಮನ್‌ಗಳು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಪ್ರತಿಬ್ಬರು ಕೂಡ ಒಂದಂಕಿಗೆ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದರು. ಆದರೆ ಅಂತಿಮವಾಗಿ ಶಿವಂ ಮಾವಿ ಹಾಗೂ ಲೂಕಿ ಫರ್ಗ್ಯೂಸನ್ ಸ್ವಲ್ಪ ಪ್ರತಿರೋಧವನ್ನು ಒಡ್ಡಿದರು. ಆದರೆ ಇದು ಚೆನ್ನೈ ಪಾಲಿಗೆ ಯಾವುದೇ ಆತಂಕವನ್ನು ಮೂಡಿಸಲಿಲ್ಲ. ಅಂತಿಮವಾಗಿ ಸಿಎಸ್‌ಕೆ 27 ರನ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನ್ಲಲಿ ನಾಲ್ಕನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡದಂತಾಗಿದೆ.

ಬ್ಯಾಟಿಂಗ್ ನಲ್ಲಿ ಫೇಲ್ ಆದ ಕೋಲ್ಕತ್ತಾ

ಬೌಲಿಂಗ್ ನಲ್ಲಿ ಮಾಡಿದ ಪ್ರಮಾದವನ್ನು ಬ್ಯಾಟಿಂಗ್ ನಲ್ಲಿ ಸುಧಾರಿಸಿಕೊಂಡು ಆಡಿದ್ದರೆ ಕೆಕೆಆರ್ ಗೆ 3ನೇ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಅವಕಾಶವಿತ್ತು. ಆರಂಭಿಕ ಆಟಗಾರರಾದ ಶುಭಮನ್ ಗಿಲ್(51) ಹಾಗೂ ವೆಂಕಟೇಶ್ ಅಯ್ಯರ್(50) ಹೊರತುಪಡಿಸಿದರೆ ಕೋಲ್ಕತ್ತಾದ ಯಾವೊಬ್ಬ ಬ್ಯಾಟ್ಸಮನ್ ಗಳು ಕೂಡ ಹೆಚ್ಚುಹೊತ್ತು ಕ್ರೀಸ್ ನಲ್ಲಿ ನಿಂತು ಆಡಲಿಲ್ಲ. ನಿತೀಶ್ ರಾಣಾ(0), ಸುನಿಲ್ ನರೈನ್(2), ನಾಯಕ ಇಯಾನ್ ಮಾರ್ಗನ್(4), ದಿನೇಶ್ ಕಾರ್ತಿಕ್(9), ಶಕಿಬ್ ಅಲ್ ಹಸನ್(0) ಮತ್ತು ರಾಹುಲ್ ತ್ರಿಪಾಠಿ(2) ಕೋಲ್ಕತ್ತಾ ತಂಡಕ್ಕೆ ಕೈಕೊಟ್ಟರು. ಹೀಗಾಗಿ ಕೆಕೆಆರ್ ಸೋಲು ಕಾಣಬೇಕಾಯಿತು.

 4ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆದ ಚೆನ್ನೈ

ಎಂ.ಎಸ್.ಧೋನಿನಾಯಕತ್ವದಲ್ಲಿ ಚೆನ್ನೈ 4ನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸಿಎಸ್‌ಕೆ 2010, 2011, 2018 ಮತ್ತು 2021ರಲ್ಲಿ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಚೆನ್ನೈ ಈ ಬಾರಿ ಫೈನಲ್ ತಲುಪಿದ ಮೊದಲ ತಂಡವಾಗಿತ್ತು. ಲೀಗ್ ಪಂದ್ಯಗಳಲ್ಲಿ ಆಡಿದ 14 ಪಂದ್ಯಗಳ ಪೈಕಿ 9 ಪಂದ್ಯಗಳನ್ನು ಧೋನಿ ಪಡೆ ಗೆದ್ದಿತ್ತು.

Exit mobile version