ತಮಿಳುನಾಡಿನವರು ಕೇಳುವ ಮೊದಲೇ ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿದೆ – ಸಿ.ಟಿ. ರವಿ ವಾಗ್ದಾಳಿ

Bengaluru: ತಮಿಳುನಾಡಿನವರು ಕೇಳುವ ಮೊದಲೇ ನೀರು ಹರಿಸಿದ ಕಾಂಗ್ರೆಸ್ (Congress) ಸರ್ಕಾರ ಇದೀಗ ರಾಜ್ಯದಲ್ಲಿ ಬರಗಾಲವಿದ್ದರೂ ರಾಜಕೀಯ ಸಂಬಂಧಕ್ಕಾಗಿ ನೀರು ಬಿಡುವ ಮೂಲಕ ನಮ್ಮ ರಾಜ್ಯದ ರೈತರನ್ನು ಬಲಿ ಕೊಡುತ್ತಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (C.T.Ravi) ಅವರು ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರು (Tamilnadu) ಕೇಳುವ ಮೊದಲೇ ನೀರು ಹರಿಸಿದ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯದಲ್ಲಿ ಬರಗಾಲವಿದ್ದರೂ ರಾಜಕೀಯ ಸಂಬಂಧಕ್ಕಾಗಿ ನೀರು ಬಿಡುವ ಮೂಲಕ ನಮ್ಮ ರಾಜ್ಯದ ರೈತರನ್ನು ಬಲಿ ಕೊಡುತ್ತಿದೆ. ಡಿಎಂಕೆ ಪರವಾಗಿ ಚುನಾವಣಾ ಪ್ರಚಾರ ಮಾಡಿರುವ ಸಿಎಂ, ಡಿಸಿಎಂ ಇದೀಗ ಕಾವೇರಿ ವಿಷಯದಲ್ಲಿ ಮಾತನಾಡದಿರುವುದು ವಿಪರ್ಯಾಸ. ಕಾಂಗ್ರೆಸ್ಸಿನ I.N.D.I ಮೈತ್ರಿಕೂಟದ ಪರಿಣಾಮ ಸಿದ್ದರಾಮಯ್ಯ ಅವರ ಸರ್ಕಾರ ಕರ್ನಾಟಕದ ಹಿತಾಸಕ್ತಿಯನ್ನೇ ಬಲಿ ಕೊಡುತ್ತಿದೆ. ಬರದ ನಡುವೆಯೂ ಕದ್ದು ಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿ, ಸ್ಟಾಲಿನ್ರನ್ನು ಮೆಚ್ಚಿಸುವುದಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಇದರ ಪರಿಣಾಮ ರಾಜಧಾನಿ ಬೆಂಗಳೂರಿಗೆ ಜಲ ಕಂಟಕ ಎದುರಾಗಲಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಬೆಂಗಳೂರಿಗರು ಹಾಹಾಕಾರ ಅನುಭವಿಸಲೇ ಬೇಕಿದೆ. ಕೆ.ಆರ್.ಎಸ್ ಜಲಾಶಯದಲ್ಲಿ ದಿನೇ ದಿನೆ ನೀರಿನ ಮಟ್ಟ ಕುಸಿಯುತ್ತಿರುವುದು ಹಾಗೂ ಸಿದ್ದರಾಮಯ್ಯ ಅವರ ಸರ್ಕಾರ ಕಾವೇರಿ ವಿಚಾರದಲ್ಲಿ ಕಳ್ಳಾಟವಾಡುತ್ತಿರುವುದೇ ಈ ದುಸ್ಥಿತಿಗೆ ಕಾರಣ ಎಂದು ಟೀಕಿಸಿದ್ದಾರೆ.

ಇನ್ನು ಪ್ರತಿದಿನ 5000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ಸುಪ್ರೀಂಕೋರ್ಟ್ (Supreme Court) ಆದೇಶಿಸಿದ ನಂತರ ರಾಜ್ಯದಲ್ಲಿ ಕಾವೇರಿ ಹೋರಾಟ ಭುಗಿಲೆದ್ದಿದೆ. ಸುಪ್ರೀಂಕೋರ್ಟ್ ಆದೇಶದ ನಂತರ ತೀವ್ರ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರ್ಕಾರ, ಪ್ರತಿದಿನ 3500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ನಿರ್ಧಾರ ಕೈಗೊಂಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ದ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದು, ಕಾವೇರಿ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿವೆ.

Exit mobile version