ಈ ರೈತ ಶಾಪ ಹಾಕುತ್ತಿದ್ದಾನೆ.ಕಣ್ಣೀರು ಹಾಕುತ್ತಾ ಗೊಗರೆಯುತ್ತಿದ್ದಾನೆ. ತನ್ನ ಕಣ್ಣೇದುರೇ ಬೆಳೆದ ಬೆಳೆ ನಾಶವಾಗಿರುವುದನ್ನು ಕಂಡು ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡು ಅಳುತ್ತಿದ್ದಾನೆ.
ಈತನ ನೋವಿಗೆ ಕಾರಣ ಏನು ಗೊತ್ತಾ ಸರ್ಕಾರಿ ಕೃಷಿ ಹೊಂಡ. ಹೌದು, ಇದು ವಿಜಯ ನಗರ ಜಿಲ್ಲೆಯ ವಟ್ಟನಹಳ್ಳಿ ಗ್ರಾಮದ ಸಣ್ಣ ರೈತನೊಬ್ಬನ ನೋವಿನ ಕತೆ.
ಕೃಷಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮಾಡಿದ ತಪ್ಪಿಗೆ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. 3 ತಿಂಗಳು ಕಷ್ಟಪಟ್ಟು ಬೆಳೆದ ಬೆಳೆ ಫಸಲು ನೀಡುವ ಹೊತ್ತಿಗೆ ರಭಸವಾದ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ.
ಇವರು ಜಾತಪ್ಪ. ಇವರು ತನ್ನ ಹೊಲದಲ್ಲಿ ಪಪ್ಪಾಯ ದಾಳಿಂಬೆಯನ್ನು ನೆಟ್ಟಿದ್ದರು. ಆದರೆ 3 ತಿಂಗಳಿಂದ ಕಷ್ಟಪಟ್ಟು ಬೆಳೆದ ಬೆಳೆ ಅವೈಜ್ಞಾನಿಕ ಕೃಷಿ ಹೊಂಡದಿಂದ ನೀರು ಪಾಲಾಗಿದೆ.
ಅದಲ್ಲದೇ ನಿಯಮದ ಪ್ರಕಾರ ಸರ್ಕಾರಿ ಹಳ್ಳದಲ್ಲಿ ಕೃಷಿ ಹೊಂಡ ನಿರ್ಮಿಸುವಂತಿಲ್ಲ. ಆದರೆ ಇಲ್ಲಿ ಇಲಾಖೆಯವರೇ ಕೃಷಿ ಹೊಂಡ ಅಕ್ರಮವಾಗಿ ಹಣ ತಿನ್ನೋ ದುರಾಸೆಯಿಂದ ನಿರ್ಮಿಸಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾರೆ.
ಇದು ಕೇವಲ ಈ ಬಾರಿಯ ಸಮಸ್ಯೆಯಲ್ಲ. ಕಳೆದ ೫ ವರ್ಷಗಳಿಂದ ಈ ಸಮಸ್ಯೆಯನ್ನು ಈ ಭಾಗದ ರೈತರು ಅನುಭವಿಸುತ್ತಿದ್ದಾರೆ.ಎಷ್ಟೇ ದೂರು ಕೊಟ್ರೂ ರೈತರ ಕಣ್ಣೀರಿಗೆ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ. ತಾವು ಮಾಡಿದ ತಪ್ಪನ್ನು ಸರಿಪಡಿಸುವ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ ಅನ್ನೋದು ರೈತರ ನೋವು.
ಈ ಸಮಸ್ಯೆಯಿಂದಾಗಿ ವರ್ಷದ ಕೂಳನ್ನು ರೈತರು ಕಳೆದುಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಸಮಸ್ಯೆ ಪದೇ ಪದೇ ಉಲ್ಬಣಗೊಳ್ಳುತ್ತಿದ್ದರೂ ನಮ್ಮ ಕೂಗನ್ನು ಯಾರು ಕೇಳುವವರಿಲ್ಲ. ನಮ್ಮ ಬದುಕನ್ನು ಹಳ್ಳಕ್ಕೆ ತಳ್ಳಿ ಅಧಿಕಾರಿಗಳು ತಮಾಷೆ ನೋಡಿಕೊಂಡು ತೆಪ್ಪಗೆ ಕುಳಿತಿದ್ದಾರೆ ಎಂಬುದು ರೈತರ ಗೋಳಾಗಿದೆ.
ನಮಗೆ ನ್ಯಾಯ ಕೊಡಿಸಿ ಎಂದು ರೈತರು ಗೋಗರೆಯುತ್ತಿದ್ದರೂ, ಪರಿಹಾರ ಮಾತ್ರ ಶೂನ್ಯವಾಗಿದೆ. ಇದು ನಿಜವಾಗ್ಲೂ ಅತ್ಯಂತ ಶೋಚನೀಯ ಸಂಗತಿಯಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಆಲಿಸಿ ಸೂಕ್ತ ಪರಿಹಾರವನ್ನು ನೀಡಲಿ ಎಂಬುದು ವಿಜಯಟೈಮ್ಸ್ ಆಶಯವಾಗಿದೆ.
ವಿಜಯಪುರದಿಂದ ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್