ಕರ್ನಾಟಕಕ್ಕೆ ಮತ್ತೆ ಹಿನ್ನಡೆ : ಕಾವೇರಿ ನೀರನ್ನು ತಮಿಳುನಾಡಿಗೆ ಪುನಃ 18 ದಿನಗಳ ಕಾಲ ಬಿಡುವಂತೆ CWRC ಆದೇಶ

New Delhi: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ (Karnataka) ಮತ್ತೆ ಹಿನ್ನಡೆಯಾಗಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ. 18 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿದ್ದು, ಇದರಿಂದ ಕರ್ನಾಟಕದಲ್ಲಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಕಾವೇರಿ ವಿಚಾರವಾಗಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದರೂ ತಮಿಳುನಾಡಿಗೆ (Tamilnadu) ಮತ್ತೆ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದ್ದು, ಮುಂದಿನ 18 ದಿನ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿ (CWRC) ಸೂಚಿಸಿದೆ. ಇದರಿಂದ ಕರ್ನಾಟಕದಲ್ಲಿ ಕಾವೇರಿ ಹೋರಾಟದ ಕಿಚ್ಚು ಮತ್ತಷ್ಟು ತಾರಕಕ್ಕೇರುವ ಸಾಧ್ಯತೆಗಳಿವೆ.

ಸೆಪ್ಟೆಂಬರ್‌ (September) 28 ರಿಂದ ಅಕ್ಟೋಬರ್‌ 15ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ದಿಲ್ಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಡಬ್ಲ್ಯೂಆರ್‌ಸಿ ಕರ್ನಾಟಕಕ್ಕೆ ಆದೇಶ ನೀಡಿದೆ. ಈ ಹಿಂದಿನ ಸಭೆಯಲ್ಲಿ ಸಿಡಬ್ಲ್ಯೂಆರ್‌ಸಿ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಹರಿಸಲು ಕರ್ನಾಟಕಕ್ಕೆ ಸೂಚನೆ ನೀಡಿದ್ದು, ಸೆಪ್ಟೆಂಬರ್‌ 27ಕ್ಕೆ ಆ ಆದೇಶ ಮುಕ್ತಾಯವಾಗಲಿದೆ.

ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿಯ ಈ ಆದೇಶದಿಂದ 2.5 ಟಿಎಂಸಿ (TMC) ನೀರು ಉಳಿತಾಯವಾಗಲಿದೆ ಎಂದು ಹೇಳಲಾಗಿದ್ದು, ಸಿಡಬ್ಲ್ಯೂಆರ್‌ಸಿ ಮುಂದೆ ವಾದ ಮಂಡಿಸಿದ್ದ ಕರ್ನಾಟಕ ಯಾವುದೇ ಕಾರಣಕ್ಕೂ ನೀರು ಬಿಡಲು ಆಗಲ್ಲ ಎಂದು ಹೇಳಿತ್ತು.

ತಮಿಳುನಾಡು ಪ್ರತಿದಿನ 12,500 ಕ್ಯೂಸೆಕ್ ನೀರು ಹರಿಸುವಂತೆ ವಾದ ಮಂಡಿಸಿರುವುದಲ್ಲದೇ ತನ್ನ ಪಾಲಿನ ಬಾಕಿ ಉಳಿದ 83 ಟಿಎಂಸಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತ್ತು.

ಭವ್ಯಶ್ರೀ ಆರ್.ಜೆ

Exit mobile version