ದಕ್ಷಿಣ ಭಾರತದ ರಾಜ್ಯಗಳಿಗೆ ನಿವಾರ್ ಚಂಡಮಾರುತ ಭೀತಿ

ನವದೆಹಲಿ, ನ. 23: ಮುಂಗಾರು ಅವಧಿ ಮುಗಿದ ಬಳಿಕವೂ ಸತತ ವಾಯುಭಾರ ಕುಸಿತದಿಂದ ಚಂಡಮಾರುತದ ವಾತಾವರಣ ನಿರ್ಮಾಣವಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಮೇಲೆ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸುರಿಯುವ ಸನ್ನಿವೇಶವಿದೆ. ಇದರಿಂದಾಗಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮುಂತಾದೆಡೆ ನಿರಂತರ ಮಳೆಯಾಗುತ್ತಿದೆ.

ಈಗ ನಿವಾರ್ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಅನೇಕ ಕಡೆ ಭಾರಿ ಮಳೆ ಸುರಿಸುವ ಸಾಧ್ಯತೆ ಇದೆ. ನವೆಂಬರ್ 25ರಂದು ಕರೈಕಲ್, ಪುದುಚೆರಿಯಲ್ಲಿ, ನ. 25 ಮತ್ತು 26ರಂದು ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ರಾಯಲಸೀಮೆ ಜಿಲ್ಲೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆ ಸುರಿಸುವ ಸಂಭವವಿದೆ. ವಿಶಾಖಪಟ್ಟಣಂ ಮತ್ತು ಪೂರ್ವ ಗೋದಾವರಿ ಜಿಲ್ಲೆಯಲ್ಲಿಯೂ ಮಳೆ ಅಬ್ಬರಿಸಲಿದೆ. ಇದರ ಪರಿಣಾಮ ಬೆಂಗಳೂರಿನ ಮೇಲೆಯೂ ಉಂಟಾಗಬಹುದು. ನಿವಾರ್ ಚಂಡಮಾರುತವು ಶ್ರೀಲಂಕಾದ ಉತ್ತರ ಭಾಗ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯತ್ತ ಪಶ್ಚಿಮದಿಂದ ಚಲಿಸುತ್ತಿದೆ. ಹೀಗಾಗಿ ಈ ಭಾಗಗಳಲ್ಲಿ ನವೆಂಬರ್ 23-26ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ.

ನವೆಂಬರ್ 22 ರಿಂದ 25ರವರೆಗೆ ಹಿಂದೂ ಮಹಾಸಾಗರ, ದಕ್ಷಿಣ ಬಂಗಾಳ ಕೊಲ್ಲಿಯ ಕೇಂದ್ರ ಭಾಗಗಳ ಪ್ರದೇಶಗಳಲ್ಲಿ ಮತ್ತು ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರ, ಮನ್ನಾರ್ ಕೊಲ್ಲಿ, ತಮಿಳುನಾಡಿನ ಕರಾವಳಿ, ಪುದುಚೆರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಮೀನುಗಾರಿಕೆಯ ಸಾಹಸಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ.

Exit mobile version