ಪಿಯುಸಿ ಫಲಿತಾಂಶ ಪ್ರಕಟ ಮಾಡಲು ಮುಹೂರ್ತ ಫಿಕ್ಸ್!

ಬೆಂಗಳೂರು, ಜು.16: ಕೊರೋನಾ ಕಾರಣದಿಂದಾಗಿ  ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಪಾಸ್​ ಮಾಡಿದ್ದ ಶಿಕ್ಷಣ ಇಲಾಖೆ, ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡುವುದಾಗಿ ಹೇಳಿತ್ತು.   ಅಂಕ ಕೊಡಲು ಎಸ್​ಎಸ್​ಎಲ್​ಸಿ ಮತ್ತು ಪ್ರಥಮ ಪಿಯುಸಿ ಮಾರ್ಕ್ಸ್​​ನ್ನೂ ಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿತ್ತು. ಅಂತೆಯೇ ಈಗ ಪಿಯುಸಿ ಫಲಿತಾಂಶ ಪ್ರಕಟ ಮಾಡಲು ಮುಹೂರ್ತ ಫಿಕ್ಸ್​ ಆಗಿದೆ. 

ಎಸ್​ಎಸ್​ಎಲ್​ಸಿ ಮೊದಲ ಪರೀಕ್ಷೆಯ ಮರುದಿನವೇ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.  ಜು.19 ರಂದು 10ನೇ ತರಗತಿ ಮೊದಲ ಪರೀಕ್ಷೆ ನಡೆಯಲಿದೆ. ಜು.20ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.

ಈ ಬಾರಿ ಯಾವುದೇ ರ್ಯಾಂಕ್​ ಇರುವುದಿಲ್ಲ. ಸಿಬಿಎಸ್​ಇ ಮಾದರಿಯಲ್ಲಿ ಎಸ್​ಎಸ್​ಎಲ್​ಸಿ, ಪ್ರಥಮ ಪಿಯು ಅಂಕಗಳನ್ನು ಪರಿಗಣಿಸಿ ಫಲಿತಾಂಶ ನೀಡಲಾಗುತ್ತದೆ. ಗ್ರೇಡ್​ ಬದಲು ಅಂಕಗಳ ಆಧಾರದಲ್ಲಿ ದ್ವಿತೀಯ ಪಿಯು ಫಲಿತಾಂಶವನ್ನು ಕೊಡಲಾಗುತ್ತದೆ.

ಯಾವುದೇ ಗೊಂದಲಗಳಾಗದಂತೆ ಫಲಿತಾಂಶ ನೀಡಲು ಶಿಕ್ಷಣ ಇಲಾಖೆ ಪ್ರಾಮಾಣಿಕ   ಪ್ರಯತ್ನ ನಡೆಸುತ್ತಿದೆ. ಪರೀಕ್ಷೆ‌ ಇಲ್ಲದೇ ಫಲಿತಾಂಶ ಪ್ರಕಟಕ್ಕೆ‌ ಪಿಯು ಬೋರ್ಡ್ ಸಿದ್ದತೆ ಮಾಡಿಕೊಂಡಿದೆ. ಆದರೆ ಇನ್ನೂ ಸಹ ಫಲಿತಾಂಶ ಹೇಗೆ ನೀಡಬೇಕು ಎಂಬ ಗೊಂದಲ ಬಗೆಹರಿದಿಲ್ಲ. ದೊಡ್ಡ ಸವಾಲೊಂದು  ಪಿಯು ಬೋರ್ಡ್​ ಮುಂದಿದೆ.

ಹಾಗಿದ್ರೆ ಪಿಯು ಬೋರ್ಡ್​ ಮುಂದಿರುವ ಆ ದೊಡ್ಡ ಸವಾಲು ಯಾವುದು ಅಂತೀರಾ? ಪ್ರತೀ ವರುಷ ಪರೀಕ್ಷೆಗೆ ಕೊಟ್ಟ ರಿಜಿಸ್ಟರ್​ ನಂಬರ್​ ಮೇಲೆ ಫಲಿತಾಂಶ ಸಿಗುತ್ತಿತ್ತು. ಅಂದರೆ ಪಿಯು ಬೋರ್ಡ್​​ ವೆಬ್​ಸೈಟ್​ಗೆ ಹೋಗಿ ವಿದ್ಯಾರ್ಥಿಯ ರಿಜಿಸ್ಟರ್ ನಂಬರ್ ಹಾಕಿದರೆ ಆಗ ಫಲಿತಾಂಶ ಸಿಗುತ್ತಿತ್ತು. ಆದರೆ ಈ ಬಾರಿ ಪರೀಕ್ಷೆಯೇ ನಡೆಸಿಲ್ಲವಾದ್ದರಿಂದ ರಿಜಿಸ್ಟರ್​ ನಂಬರ್​ ಸಿಕ್ಕಿಲ್ಲ.

ಫಲಿತಾಂಶದ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸದಾಗಿ ರಿಜಿಸ್ಟರ್‌ ನಂಬರ್ ಜನರೇಟ್ ಮಾಡಲು ಪಿಯು ಬೋರ್ಡ್​​ ವ್ಯವಸ್ಥೆ ಮಾಡಿದೆ.  ಅದರಂತೆ ಬೋರ್ಡ್​ ನೀಡಿದ ರಿಜಿಸ್ಟರ್​ ನಂಬರ್​​​(Know my number)ನ್ನು ಪಿಯು ವೆಬ್ ಸೈಟ್​​​ನಲ್ಲಿ ಹಾಕಿ ಆ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು. ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಹಾಗೂ ಆಯಾ ಕಾಲೇಜಿಗೆ ಈ ಕುರಿತು ಫಲಿತಾಂಶದ ಮಾಹಿತಿ ನೀಡಲಾಗುತ್ತದೆ.

ಫಲಿತಾಂಶ ಮುನ್ನ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್‌ ನಂಬರ್​ನ್ನು ಐಡೆಂಟಿಫೈ ಮಾಡಿಕೊಳ್ಳಬೇಕು. ಜನರೇಟ್ ಆದ ರಿಜಿಸ್ಟರ್ ನಂಬರ್ ಚೆಕ್‌ ಮಾಡಿ ಖಚಿತಪಡಿಸಿಕೊಳ್ಳಬೇಕು. ಆನಂತರ ಜು.20ರಂದು ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗುತ್ತದೆ.

Exit mobile version