ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ; ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, . 14: ನಗೆಪಾಟಲಾಗಿರುವ ರಾತ್ರಿ ಕಫ್ರ್ಯೂನಂತಹ ಕ್ರಮಗಳಿಂದ ಯಾವುದೇ ಪುರುಷಾರ್ಥ ಸಾಧನೆಯಾಗುವುದಿಲ್ಲ. ಅದನ್ನು ಕೈ ಬಿಟ್ಟು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಾಲ್ಕು ಪುಟದ ಸುದೀರ್ಘ ಪತ್ರ ಬರೆದಿರುವ ಅವರು, ಚುನಾವಣೆ ಕಾರಣಕ್ಕಾಗಿ ಸರ್ವಪಕ್ಷಗಳ ಸಭೆಯನ್ನು ವಿಳಂಬ ಮಾಡಬೇಡಿ, ಏ.18ಕ್ಕಿಂತಲೂ ಮೊದಲೇ ಸಭೆ ನಡೆಸಿ, ತಜ್ಞರ ಸಮಿತಿಯ ಶಿಫಾರಸುಗಳನ್ನು ಅಲ್ಲಿ ಮಂಡಿಸಿ, ಚರ್ಚಿಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಿ ಹಾಗೂ ಅವುಗಳನ್ನು ತಕ್ಷಣ ಜಾರಿ ಮಾಡಿ ಎಂದು ಸಲಹೆ ಮಾಡಿದ್ದಾರೆ.

ಒಂದೂವರೆ ವರ್ಷದಿಂದ ಜಗತ್ತನ್ನೇ ಕೊರೊನಾ ತತ್ತರಿಸುವಂತೆ ಮಾಡಿದೆ. ಕರ್ನಾಟಕಕ್ಕೆ 2020ರ ಫೆಬ್ರವರಿಯಲ್ಲಿ ಕಾಲಿಟ್ಟು ಸತತವಾಗಿ 14 ತಿಂಗಳ ಕಾಲ ಏರಿಳಿತಗಳನ್ನು ರಾಜ್ಯ ಕಂಡಿದೆ. ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಗಳು, ಆಮ್ಲಜನಕ, ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಔಷಧಿ ಸೇರಿದಂತೆ ಹಲವು ಕೊರತೆಗಳು ಇದ್ದವು. ಆರಂಭದ ಸಂದರ್ಭವಾಗಿದ್ದರಿಂದ ಅದಕ್ಕೆ ಕ್ಷಮೆ ಇತ್ತು. ಆದರೆ, ಸುದೀರ್ಘ ಅನುಭವದ ನಂತರವೂ ಅದೇ ವಾತಾವರಣ ಮುಂದುವರೆಯುವುದು ಸರಿಯಲ್ಲ. ಈಗಲೂ ಹಾಸಿಗೆ, ಆಯಕ್ಸಿನ್ ಕೊರತೆ ಕಾಣುತ್ತಿದೆ.

ಖಾಸಗಿ ಆಸ್ಪತ್ರೆಯಲ್ಲಿ ಮೀಸಲಿಟ್ಟಿದ್ದ ಹಾಸಿಗೆಗಳನ್ನು ಕೈ ಬಿಡಲಾಗಿದೆ. ಜೀವ ರಕ್ಷಕ ಔಷಧಿ ರೆಮ್‍ಡೆಸಿವೀರ್ ಕೊರತೆ ಎದ್ದು ಕಾಣುತ್ತಿದೆ. ಉಸಿರಾಟದ ತೊಂದರೆಯಿಂದಾಗಿ ಸುಮಾರು 40ರಿಂದ 50 ಸಾವಿರ ಜನ ಬಳಲುತ್ತಿದ್ದಾರೆ. ಹಾಸಿಗೆಗಳ ಲಭ್ಯತೆ 5ಸಾವಿರ ಮಾತ್ರ ಇದೆ ಎಂದು ಅವರು ಆಕ್ಷೇಪಿಸಿದ್ದಾರೆ. ಆಮ್ಲಜನಕವನ್ನು ಬಳಕೆ ಮಾಡುವ ಕೈಗಾರಿಕೆಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಿ ಲಭ್ಯ ಇರುವ ಎಲ್ಲಾ ಆಮ್ಲಜನಕವನ್ನು ಜೀವ ರಕ್ಷಣೆಗೆ ಬಳಸುವಂತೆ ಸಲಹೆ ನೀಡಿದ್ದಾರೆ.

ಹೆಚ್ಚು ಜನ ಸೇರುವ ಕಡೆ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಿ. ಚಿಕಿತ್ಸೆಯ ಪ್ರಮಾಣವನ್ನು ಹೆಚ್ಚಳ ಮಾಡಿ ಪರೀಕ್ಷೆಗೆ ಅಗತ್ಯ ಇರುವ ಟ್ರೂನಟ್ ಕಿಟ್‍ಗಳ ಕೊರತೆಯನ್ನು ನಿವಾರಣೆ ಮಾಡಿ. ಔಷಧಿಗಳು ಸುಲಭವಾಗಿ ಜನರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಿ, ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ದಾಸ್ತಾನು ಮಾಡಿ ಎಂದು ಎಚ್.ಕೆ.ಪಾಟೀಲ್ ಸಲಹೆ ಮಾಡಿದ್ದಾರೆ.

ರೋಗ ನಿರೋಧಕ ಲಸಿಕೆಗಳ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳಿವೆ. ಅಧಿಕೃತವಾದ ವೈಜ್ಞಾನಿಕ ವರದಿಗಳ ಮೂಲಕ ಲಸಿಕೆ ಪರಿಣಾಮಕಾರಿ ಎಂದು ಸಾಬೀತು ಮಾಡಿ, ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿ ಎಂದು ಹೇಳಿದ್ದಾರೆ.

Exit mobile version