ಇಳಿಕೆಕಾಣುತ್ತಿರುವ ಕೊರೋನಾ ಪ್ರಕರಣ: ಒಂದೇ ದಿನದಲ್ಲಿ 4,329 ಮಂದಿ ಸಾವು

ನವದೆಹಲಿ, ಮೇ. 18: ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 2.63 ಲಕ್ಷ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 4,329 ಮಂದಿ ಸಾವಿಗೀಡಾಗಿದ್ದಾರೆ. ಕಳೆದೆರಡು ದಿನಗಳಿಂದ ದೇಶದಲ್ಲಿ ಹೊಸ ಕೊವಿಡ್ ಪ್ರಕರಣಗಳು 3 ಲಕ್ಷಕ್ಕಿಂತ ಕಡಿಮೆ ಆಗಿದೆ. ದೇಶದಲ್ಲೀಗ ಒಟ್ಟು ಕೊವಿಡ್ ರೋಗಿಗಳ ಸಂಖ್ಯೆ 2.5ಕೋಟಿ ಆಗಿದೆ. ಇಲ್ಲಿಯವರೆಗೆ 2.78 ಲಕ್ಷ ರೋಗಿಗಳು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇ 14.09 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 33 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 4,22,436 ಮಂದಿ ಚೇತರಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ 38,603 ಪ್ರಕರಣಗಳು ವರದಿ ಆಗಿದ್ದು ತಮಿಳುನಾಡು 33,075 ಪ್ರಕರಣಗಳನ್ನು ದಾಖಲಿಸಿದೆ. ಮಹಾರಾಷ್ಟ್ರದಲ್ಲಿ 26,616 ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ ಕನಿಷ್ಠ 4,329 ಸಾವುಗಳು ವರದಿಯಾಗಿವೆ, ಇದು ಒಂದು ದಿನದಲ್ಲಿ ಇದುವರೆಗೆ ಸಂಭವಿಸಿದ ಅತಿ ಹೆಚ್ಚು ಸಾವಿನ ಸಂಖ್ಯೆ ಇದಾಗಿದೆ. ಮಹಾರಾಷ್ಟ್ರದಲ್ಲಿ 1,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದರೆ, ಕರ್ನಾಟಕದಲ್ಲಿ 476 ಮಂದಿ ಸಾವನ್ನಪ್ಪಿದ್ದಾರೆ.

Exit mobile version