ದೆಹಲಿ: ದೇಶಿ ಮತ್ತು ವಿದೇಶಿ ಬ್ರಾಂಡ್‌ಗಳ ಮದ್ಯಗಳ ಹೋಮ್ ಡೆಲಿವರಿಗೆ ಅವಕಾಶ, ಷರತ್ತುಗಳು ಅನ್ವಯ

ನವದೆಹಲಿ, ಜೂ. 01: ದೆಹಲಿ ಸರ್ಕಾರವು ಭಾರತೀಯ ಮತ್ತು ವಿದೇಶಿ ಬ್ರಾಂಡ್‌ಗಳ ಮದ್ಯವನ್ನು ಮನೆಗೆ ತಲುಪಿಸಲು ಅವಕಾಶ ನೀಡಿದೆ. ಜನರು ಮೊಬೈಲ್ ಅಪ್ಲಿಕೇಶನ್ ಅಥವಾ ಆನ್‌ಲೈನ್ ವೆಬ್ ಪೋರ್ಟಲ್ ಮೂಲಕ ಮದ್ಯಕ್ಕೆ ಆರ್ಡರ್ ನೀಡಬೇಕಿದ್ದು, ನಿರ್ದಿಷ್ಟ ಷರತ್ತು ಅನ್ವಯವಾಗಲಿದೆ.

ಸೋಮವಾರ ದೆಹಲಿ ಸರ್ಕಾರದ ಅಧಿಸೂಚನೆಯಲ್ಲಿ ದೆಹಲಿ ಅಬಕಾರಿ (ತಿದ್ದುಪಡಿ) ನಿಯಮಗಳು, 2021 ರಲ್ಲಿ ಕಾನೂನು ನಿಬಂಧನೆಯನ್ನು ಸೇರಿಸಲಾಗಿದೆ. ದೆಹಲಿ ಅಬಕಾರಿ ನೀತಿ, 2021 ರಲ್ಲಿ ಬದಲಾವಣೆಗಳಿಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅನುಮೋದನೆ ಪಡೆದ ಒಂದು ವಾರದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ನಿಯಮಗಳ ಪ್ರಕಾರ ಪ್ರತಿ ಮದ್ಯ ಚಿಲ್ಲರೆ ವ್ಯಾಪಾರಿಗಳಿಗೆ ಮನೆ ಮದ್ಯ ವಿತರಣೆಯನ್ನು ನಡೆಸಲು ಅನುಮತಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಮದ್ಯವನ್ನು ಮನೆಗೆ ತಲುಪಿಸಲು ನಿರ್ದಿಷ್ಟ ರೀತಿಯ ಪರವಾನಗಿ ಹೊಂದಿರುವವರಿಗೆ ಮಾತ್ರ ಅನುಮತಿಸಲಾಗುತ್ತದೆ. ದೆಹಲಿಯಲ್ಲಿ, ನಾವು ಈಗ ಎಲ್ -13 ಪರವಾನಗಿ ಹೊಂದಿರುವವರಿಗೆ ಮಾತ್ರ ಮದ್ಯವನ್ನು ಮನೆಗೆ ತಲುಪಿಸಲು ಅನುಮತಿ ನೀಡಿದ್ದೇವೆ “ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದು ಹೊಸ ಪರವಾನಗಿ ಕೆಟಗರಿ ಅಲ್ಲ, ಹಿಂದಿನ ಅಬಕಾರಿ ನಿಯಮಗಳಲ್ಲೂ ಎಲ್ -13 ಪರವಾನಗಿಗಳು ಅಸ್ತಿತ್ವದಲ್ಲಿದ್ದವು. ಆದರೆ ಷರತ್ತುಗಳಲ್ಲಿನ ಸಂಕೀರ್ಣತೆಗಳ ಕಾರಣದಿಂದಾಗಿ ಅಂತಹ ಯಾವುದೇ ಪರವಾನಗಿಯನ್ನು ಇಲ್ಲಿಯವರೆಗೆ ನೀಡಲಾಗಿಲ್ಲ. ಅದು ಮದ್ಯವನ್ನು ಫ್ಯಾಕ್ಸ್ ಅಥವಾ ಇಮೇಲ್‌ಗಳ ಮೂಲಕ ಮಾತ್ರ ಮನೆಗಳಿದ ತಲುಪಿಸಬಹುದು. ಹೊಸ ಅಬಕಾರಿ ನಿಯಮಗಳ ಪ್ರಕಾರ ಯಾವುದೇ ಹಾಸ್ಟೆಲ್, ಕಚೇರಿ ಮತ್ತು ಸಂಸ್ಥೆಗೆ ವಿತರಣೆಯನ್ನು ಮಾಡಲಾಗುವುದಿಲ್ಲ ಎಂದು ಹೇಳುತ್ತದೆ.ಈ ಆದೇಶದ ಬಗ್ಗೆ ದೆಹಲಿ ಸರ್ಕಾರ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಅಂಗಡಿಗಳಲ್ಲಿ ಭಾರಿ ಜನಸಂದಣಿಯನ್ನು ಕಂಡ ಲಾಕ್‌ಡೌನ್‌ಗಳ ಹಿನ್ನೆಲೆಯಲ್ಲಿ ಮದ್ಯ ತಯಾರಕರು ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರವನ್ನು ಮನೆಗೆ ತಲುಪಿಸಲು ಅನುಮತಿ ನೀಡುವಂತೆ ಕೇಳಿದ ನಂತರ ಈ ಕ್ರಮವು ಕೈಗೊಳ್ಳಲಾಗಿದೆ.

ಇಲ್ಲಿಯವರೆಗೆ, ಪಂಜಾಬ್, ಛತ್ತೀಸಗಢ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೋಮ್ ಡೆಲಿವರಿ ಮದ್ಯ ವಿತರಣೆಗೆ ಅನುವು ಮಾಡಿಕೊಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.

Exit mobile version