ನ್ಯಾಯಾಲಯದ ಮೊರೆ ಹೋದವರನ್ನು ಸಂಪುಟದಿಂದ ವಜಾ ಮಾಡಿ: ಸಾರಾ ಆಗ್ರಹ

ಮೈಸೂರು, ಮಾ. 06: ನ್ಯಾಯಾಲಯದ ಮೊರೆ ಹೋಗಿರುವವರನ್ನು ಸಂಪುಟದಿಂದ ವಜಾ ಮಾಡಿ ಎಂದು ಶಾಸಕ ಸಾ.ರಾ.ಮಹೇಶ್‌ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಸದನದಲ್ಲೂ ಒತ್ತಾಯ ಮಾಡುತ್ತೇನೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಅರ್ಜಿ ಹಾಕಿರುವುದು ನಾವೆಲ್ಲ ತಲೆ ತಗ್ಗಿಸುವ ವಿಚಾರ. ಇದೆಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ, ಅದು ಆಚೆಗೆ ಬರಬೇಕು. ಬಾಂಬೆಯಲ್ಲೂ ಅಷ್ಟು ಟೈಟ್ ಸೆಕ್ಯೂರಿಟಿ ಇಟ್ಟುಕೊಂಡಿದ್ದವರು ಯಾಕೆ ಅರ್ಜಿ ಹಾಕಿದ್ದೀರಿ? ಇವರನ್ನು ಇಟ್ಟುಕೊಂಡು ಬ್ಲಾಕ್‌ಮೆಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ? ಸಚಿವರನ್ನೇ ಬ್ಲಾಕ್ ಮೇಲ್ ಮಾಡುವುದಾದರೆ ಜನಸಾಮಾನ್ಯರ ಗತಿ ಏನು? ಸಿಎಂ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ನಮ್ಮ ಸ್ನೇಹಿತರು ಹಿಂದೆ ಹೇಳಿದಾಗ ಸುಳ್ಳು ಅಂದುಕೊಂಡೆ. ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೀತಿನಿ ಅಂದಿದ್ದರು. ಬಹುಶ ಅದರಲ್ಲಿ ಇದು ಉಲ್ಲೇಖ ಆಗಬಹುದು. ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ದೆವು ಅಂದರು. ಬಾಂಬೆನಲ್ಲಿ ಏನು ಮಾಡಿದ್ದರು ಅಂತ ಈಗ ಹೇಳಲಿ. ಅದನ್ನು ಮಾತನಾಡೋಕು ಅಸಹ್ಯ ಆಗುತ್ತದೆ ಬೇಸರ ವ್ಯಕ್ತಪಡಿಸಿದರು.

ವಿಡಿಯೊ ಪ್ರಸಾರಕ್ಕೆ ತಡೆ ಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನ‌. ನಿಮಗೆ ಯಾಕೇ ಅನುಮಾನ. ಮೊನ್ನೆಯೂ ಅನೇಕ ಶಾಸಕರ ವಿಡಿಯೊ ಇದೆ ಅಂತ ಹೇಳಿದ್ದರು. ಆ ಹೇಳಿಕೆ ನೀಡಿದವರನ್ನು ತಕ್ಷಣ ಯಾಕೇ ಅರೆಸ್ಟ್ ಮಾಡಲಿಲ್ಲ. ಅದೇನು ಬ್ಲಾಕ್‌ಮೇಲ್ ತಂತ್ರನಾ ಎಂದು ಪ್ರಶ್ನಿಸಿದರು.

ತಪ್ಪು ಮಾಡದೆ ಇದ್ದರೆ ನೀವ್ಯಾಕೆ ನ್ಯಾಯಾಲಯಕ್ಕೆ ಹೋಗಿದ್ದೀರಿ. ಬಾಂಬೆಗೆ ಹೋದವರ ಬಗ್ಗೆ ಇನ್ನು ಏನೇನು ಇದೇಯೊ. ಈ ರೀತಿಯ ಸರ್ಕಾರ ತರುವುದಕ್ಕೆ ಬಾಂಬೆಗೆ ಹೋಗಿದ್ದು, ಇದೇನಾ ನಿಮ್ಮ ಘನಕಾರ್ಯ ಎಂದು ಛೀಮಾರಿ ಹಾಕಿದರು.

Exit mobile version