ರಾಜ್ಯದಲ್ಲಿ ಇಂದಿನಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ವಿತರಣೆ

ಬೆಂಗಳೂರು, ಮಾ. 01: ದೇಶದಾದ್ಯಂತ ಕೊರೊನಾ‌ ಎರಡನೇ ಅಲೆಯ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ, ದೇಶದಲ್ಲಿ ‌ಕೊರೊನಾ‌ ಲಸಿಕೆ ಅಭಿಯಾನ ಮುಂದುವರೆದಿದ್ದು, ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ನೀಡಲಾಗುತ್ತದೆ.

ಕರ್ನಾಟಕದ 5,500 ಕೇಂದ್ರಗಳಲ್ಲಿ ಲಸಿಕೆ ಹಂಚಿಕೆ ಮಾಡಲು ಆರೋಗ್ಯ ಇಲಾಖೆ ಸಕಲ‌ ಸಿದ್ಧತೆ ಮಾಡಿಕೊಂಡಿದೆ. ಕೊರೊನಾ‌ ಲಸಿಕೆ ಪಡೆಯಲು ಕೋವಿಡ್ ಆಪ್ ನಲ್ಲಿ ಆನ್ಲೈನ್ ನೊಂದಣಿಗೂ ಅವಕಾಶ ಕಲ್ಪಿಸಿದ್ದು, ಜತೆಗೆ ಆಧಾರ್ ಕಾರ್ಡ್ ತೋರಿಸಿ ನೇರವಾಗಿ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ನೇರವಾಗಿ ಲಸಿಕೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ‌ಎಲ್ಲಾ ತಯಾರಿ ಮಾಡಿಕೊಂಡಿದೆ. 45 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಕೊರೊನಾ ಲಸಿಕೆ ಲಭ್ಯವಿದ್ದು, ರಾಜ್ಯದಲ್ಲಿ ಸುಮಾರು 1.66 ಕೋಟಿ ಫಲಾನುಭವಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಲಸಿಕೆ ಅಭಿಯಾನಕ್ಕಾಗಿ
ರಾಜ್ಯದಲ್ಲಿ 13.5 ಲಕ್ಷ ಕೋವಿಶೀಲ್ಡ್, 1.5 ಲಕ್ಷ ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 15 ಲಕ್ಷ ಡೋಸ್ ಲಸಿಕೆ ಲಭ್ಯವಿದ್ದು, ಅಗತ್ಯಕ್ಕೆ ಅನುಗುಣವಾಗಿ ಜಿಲ್ಲೆಗಳಿಗೆ ಹಂಚಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಇನ್ನೂ ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕೋವಿಡ್ ಅಪಾಯವನ್ನು ನಿರ್ಲಕ್ಷಿಸದಿರಿ. ಎಲ್ಲ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ. ಕೊರೋನಾ ವಿರುದ್ಧ ಲಸಿಕೆಯೇ ನಮ್ಮ ಸುರಕ್ಷಾ ಕವಚ. 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಇಂದಿನಿಂದ ಲಸಿಕೆ ಪಡೆಯಬಹುದು, ನಿಮ್ಮ ಹತ್ತಿರದ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಳ್ಳಿ. ಜೊತೆಯಾಗಿ ನಾವೆಲ್ಲರೂ ಕೊರೋನಾ ಹಿಮ್ಮೆಟ್ಟಿಸೋಣ ಎಂದು ಮನವಿ ಮಾಡಿದ್ದಾರೆ.

Exit mobile version