ಸಂಬಂಧದಲ್ಲಿ ಸಂವಹನ ನಡೆಸುವಾಗ ಈ ತಪ್ಪುಗಳನ್ನು ಮಾಡಬೇಡಿ..

ಯಾವುದೇ ಸಂಬಂಧ ಗಟ್ಟಿಯಾಗಿರಬೇಕಾದರೆ ಸಂವಹನ ಎಂಬುದು ಬಹಳ ಮುಖ್ಯ. ನಿಮ್ಮ ತಲೆಯೊಳಗೆ ಏನು ನಡೆಯುತ್ತದೆ, ಒಂದು ನಿರ್ದಿಷ್ಟ ಸನ್ನಿವೇಶದ ಬಗ್ಗೆ ಏನು ಯೋಚಿಸುತ್ತೀರಿ, ನಿಮ್ಮ ಮನದಲ್ಲಿ ಓಡುತ್ತಿರುವ ಭಾವನೆಗಳಾವುವು ಇಂತಹ ಎಲ್ಲವನ್ನೂ ನಿಮ್ಮ ಸಂಗಾತಿಗೆ ತಿಳಿಸಬೇಕಾಗುವುದು. ಇದು ತಪ್ಪುಗ್ರಹಿಕೆ ಹಾಗೂ ಇಬ್ಬರ ನಡುವೆ ಉಂಟಾಗುವ ಭಿನ್ನಾಭಿಪ್ರಾಯಗಳನ್ನ ಕಡಿಮೆ ಮಾಡುವುದು. ಆದರೆ ಕೆಲವರು ಇದೇ ವಿಚಾರದಲ್ಲಿ ತಪ್ಪುಗಳನ್ನು ಮಾಡಿ ಎಡವುತ್ತಾರೆ. ಆದ್ದರಿಂದ ಇಲ್ಲಿ ನಿಮ್ಮ ಸಂಗಾತಿಯ ಬಳಿ ಉತ್ತಮವಾಗಿ ಸಂವಹನ ನಡೆಸಲು ಪ್ರಯತ್ನಿಸುವಾಗ ಮಾಡುವ ತಪ್ಪುಗಳನ್ನು ವಿವರಿಸಲಾಗಿದೆ.

ಸಂವಹನದ ವಿಚಾರದಲ್ಲಿ ಮಾಡುವ ತಪ್ಪುಗಳನ್ನು ಈ ಕೆಳಗೆ ನೀಡಲಾಗಿದೆ:

ಕೇಳುವ ಬದಲು ನೀವು ಮುಂದೆ ಏನು ಹೇಳಬೇಕೆಂದು ಯೋಚಿಸುವುದು:
ಸಂಬಂಧದ ಮಧ್ಯೆ ವಾದ ಉಂಟಾದಾಗ ಮಾಡುವ ಸಾಮಾನ್ಯ ತಪ್ಪು ಇದು. ನಿಮ್ಮ ಸಂಗಾತಿ ಏನು ಹೇಳುತ್ತಾರೋ ಅದನ್ನು ಸರಿಯಾಗಿ ಆಲಿಸುವುದು ಬಹಳ ಮುಖ್ಯ. ಅವರ ಮಾತುಗಳನ್ನ ಕೇಳದೇ, ಮುಂದೆ ಅದಕ್ಕೆ ಪ್ರತ್ಯುತ್ತರ ಏನು ನೀಡಬೇಕೆಂದು ಯೋಚಿಸುತ್ತಿದ್ದರೆ, ಅವರ ಮಾತು, ಉದ್ದೇಶ ಯಾವುದೂ ನಿಮಗೆ ಅರ್ಥವಾಗುವುದಿಲ್ಲ. ಇದರಿಂದ ವಾದ ಬೆಳೆಯುತ್ತಲೇ ಹೋಗುವುದು. ಆದ್ದರಿಂದ ಅವರು ಏನು ಹೇಳುತ್ತಾರೆ ಸರಿಯಾಗಿ ಕೇಳಿ, ಇದು ಸಮಸ್ಯೆಯನ್ನು ಪರಿಹರಿಸಲು ಸಹಾಯವಾಗುವುದು.

ರಕ್ಷಣಾತ್ಮಕ ನಿಲುವಿನಲ್ಲಿ ಮಾತನಾಡುವುದು:
ಅನೇಕ ದಂಪತಿಗಳ ನಡುವಿನ ಒಂದು ಪ್ರಮುಖ ಸಮಸ್ಯೆ ಏನೆಂದರೆ, ಅವರು ತಮ್ಮ ಭಿನ್ನಾಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವ ಬದಲು ತಮ್ಮ ಅಭಿಪ್ರಾಯವನ್ನು ಸಾಬೀತುಪಡಿಸಲು ಮುಂದಾಗುವುದು. ಯಾವಾಗಲೂ ನಾನು ಹೇಳಿದ್ದೇ ಸರಿ ಎಂಬ ನಿಲುವಿನಿಂದ ಮಾತನಾಡಿದರೆ ಯಾರೂ ಒಪ್ಪಿಕೊಳ್ಳುವುದಿಲ್ಲ, ಇಬ್ಬರ ಅಭಿಪ್ರಾಯಗಳಿಗೂ ಗೌರವ ಕೊಡುವುದು ತುಂಬಾ ಮುಖ್ಯ.

ಭಾವನಾತ್ಮಕ ಭಾಷೆಯನ್ನು ಬಳಸುವುದು:
ಇದನ್ನು ಸಾಮಾನ್ಯವಾಗಿ ನಾವು ಎಮೋಷನಲ್ ಬ್ಲಾಕ್ ಮೇಲ್ ಎನ್ನುತ್ತೇವೆ. ಸಮಾಧಾನವಾಗಿ ಕೂತು ಮಾತನಾಡಿ ಬಗೆಹರಿಸಬೇಕಾದ ಸಮಸ್ಯೆಗಳಿಗೆ ಭಾವನಾತ್ಮಕ ಟಚ್ ನೀಡುವುದು. ಹೀಗೆ ಮಾಡಿದಾಗ ನೀವು ಏನು ವ್ಯಕ್ತಪಡಿಸಬೇಕೆಂದಿದ್ದಿರೋ ಅದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ.

ಗಲಾಟೆ ತಪ್ಪಿಸಲು ಎಲ್ಲವನ್ನೂ ಒಳಗೇ ಇಟ್ಟುಕೊಳ್ಳುವುದು:
ನಿಮ್ಮ ಸಂಗಾತಿ ನಿಮಗಿಷ್ಟವಿಲ್ಲದ್ದನ್ನು ಮಾಡಿದ್ದು ನಿಮಗೆ ತಿಳಿದರೂ, ಸಂಘರ್ಷವನ್ನು ತಪ್ಪಿಸಲು ನೀವು ಸುಮ್ಮನಿರುವುದು ಸಹ ಸಂಬಂಧಗಳಲ್ಲಿನ ಸಾಮಾನ್ಯ ಸಂವಹನ ತಪ್ಪುಗಳಲ್ಲಿ ಒಂದಾಗಿದೆ. ಏಕೆಂದರೆ ಮುಂದೆ ಇದು ದೊಡ್ಡ ಮನಸ್ತಾಪಗಳಿಗೆ ಕಾರಣವಾಗುವುದು. ಅದಕ್ಕಾಗಿ ಆಗಿಂದಾಗಲೇ ಇಂತಹ ವಿಷಯಗಳನ್ನು ಮಾತನಾಡಿ ಪರಿಹರಿಸಿಕೊಳ್ಳುವುದು ಉತ್ತಮ.

ಏನನ್ನೂ ಹಂಚಿಕೊಳ್ಳದೇ ಮೌನವಾಗಿರುವುದು:
ನೀವು ಏನು ಹೇಳಬೇಕೆಂದಿದ್ದೀರೋ ಅದನ್ನು ಹೆಚ್ಚು ಸ್ಪಷ್ಟವಾಗಿ ಹೇಳುವುದು ಯಾವಾಗಲೂ ಉತ್ತಮ, ಆದ್ದರಿಂದ ವಾಗ್ವಾದ ಆಗುವುದು ತಪ್ಪುತ್ತದೆ. ಇಲ್ಲದಿದ್ದರೆ, ಏನು ನಡೆಯುತ್ತಿದೆ ಅಥವಾ ನೀವು ಯಾಕೆ ಅಸಮಾಧಾನಗೊಂಡಿದ್ದೀರಿ ಎಂದು ನಿಮ್ಮ ಸಂಗಾತಿಗೆ ಅರ್ಥವಾಗುವುದಿಲ್ಲ.

ನಿಮ್ಮ ಸಂಗಾತಿಗೆ ತಿಳಿಯದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದು:
ನಮ್ಮಲ್ಲಿ ಹೆಚ್ಚಿನವರು ಹೀಗೆ ಮಾಡುವುದುಂಟು. ನಿಮ್ಮ ಬಳಿ, ನಿಮ್ಮ ಸಂಗಾತಿ ಏನಾದರೂ ನೆಗೆಟಿವ್ ಭಾವನೆಗಳನ್ನು ವ್ಯಕ್ತಪಡಿಸಿದಾಗ ಅವರಿಗೆ ಸಲಹೆ ನೀಡುವ ಸಹಜ ಪ್ರವೃತ್ತಿ ನಮ್ಮಲ್ಲಿರುತ್ತದೆ. ಅವರಿಗೆ ಯಾಕೆ ಹೀಗೆ ಅನ್ನಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳದೆ ಅವರ ಸಮಸ್ಯೆಗಳನ್ನು ನಮ್ಮದೇ ಆದ ರೀತಿಯಲ್ಲಿ ಪರಿಹರಿಸುತ್ತೇವೆ. ಹೀಗೆ ಮಾಡುವುದು ತಪ್ಪು. ನಿಮ್ಮ ಸಂಗಾತಿಗೆ ಏನು ಬೇಕು ಅಥವಾ ನೀವು ಏನು ಮಾಡಬಹುದು ಎಂಬುದನ್ನು ಅವರ ಬಳಿ ಕೇಳಿ.

Exit mobile version