ಮಗುವನ್ನು ಮಲಗಿಸುವಾಗ ಸಾಕಷ್ಟು ಜಾಗರೂಕರಾಗಿರುವುದು ಮುಖ್ಯ. ಮಗುವನ್ನು ಅಂಗಾತ ಮಲಗಿಸುವುದು ಅಂದರೆ ಬೆನ್ನು ನೆಲಕ್ಕೆ ತಾಗುವಂತೆ ಮಲಗಿಸುವುದು ಮಗು ವಿಶ್ರಾಂತಿ ಪಡೆಯಲು ಸಹಾಯವಾಗುವ ಭಂಗಿಯಾಗಿದೆ. ಆದರೆ ಹುಟ್ಟಿದ 4-5 ತಿಂಗಳ ನಂತರ ಮಗು ಉರುಳಲು ಪ್ರಾರಂಭ ಮಾಡುತ್ತದೆ. ಆಗ ಮಗು ತನ್ನ ಹೊಟ್ಟೆಯ ಮೇಲೆ ಮಲಗುವುದನ್ನು ನಾವೆಲ್ಲಾ ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ ಈ ರೀತಿಯಲ್ಲಿ ನಿಮ್ಮ ಮಗುವನ್ನು ಮಲಗಲು ಬಿಡುವುದು ನಿಮ್ಮ ಮಗುವಿಗೆ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು, ಈ ಕುರಿತು ಒಂದಿಷ್ಟು ಮಾಹಿತಿ ನಿಮಗಾಗಿ.
ನಿಮ್ಮ ಮಗುವನ್ನು ಹೊಟ್ಟೆ ನೆಲಕ್ಕೆ ತಾಗುವಂತೆ ಮಲಗಿಸುವುದು ಏಕೆ ಅಪಾಯಕಾರಿ?
“ಬ್ಯಾಕ್ ಈಸ್ ಬೆಸ್ಟ್” – ಇದು ನಿಮ್ಮ ಮಗುವನ್ನು ರಾತ್ರಿಯಲ್ಲಿ ಮಲಗಿಸುವ ಮತ್ತು ಅವರ ಸುರಕ್ಷತೆಯನ್ನು ಖಾತರಿಪಡಿಸುವ ಮೂಲ ನಿಯಮವಾಗಿದೆ. ಶಿಶುವಿನ ಮಲಗುವ ಭಂಗಿಯ ಕುರಿತು ನಡೆಸಿದ ಹಲವಾರು ಅಧ್ಯಯನಗಳು ನಿಮ್ಮ ಮಗುವನ್ನು ಹೊಟ್ಟೆಯ ಮೇಲೆ ಮಲಗಿಸುವುದರಿಂದ ಎಸ್ಐಡಿಎಸ್ ಅಂದರೆ ಮಗುವಿನ ಹಠಾತ್ ಸಾವು, ಮಾರಣಾಂತಿಕ ಸ್ಥಿತಿ ಮತ್ತು ಉಸಿರುಗಟ್ಟುವಿಕೆಯಂತಹ ನಿದ್ರೆಗೆ ಸಂಬಂಧಿಸಿದ ಸಾವುಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ಎಸ್ಐಡಿಎಸ್ ಸಂಖ್ಯೆ ತೀರಾ ಕಡಿಮೆ ಇದ್ದರೂ, ಅದರ ಬಗ್ಗೆ ಜಾಗರೂಕರಾಗಿರಬೇಕು. ನಿಮ್ಮ ಮಗು ಹೊಟ್ಟೆಯ ಮೇಲೆ ಮಲಗಿರುವುದನ್ನು ನೋಡಿದಾಗಲೆಲ್ಲಾ ಅವರನ್ನು ಬೆನ್ನಿನ ಕಡೆಗೆ ತಿರುಗಿಸಬೇಕು.
ಮಗುವನ್ನು ಅಂಗಾತ ಮಲಗಿಸುವುದರಿಂದ ಸಿಗುವ ಪ್ರಯೋಜನಗಳೇನು?:
ಮಗವನ್ನು ಅಂಗಾತ ಮಲಗಿಸಬೇಕೆಂದು ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಶಿಫಾರಸು ಮಾಡುತ್ತದೆ. ಇದರಿಂದ ದೇಹದಲ್ಲಿನ ಗಾಳಿಯ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ಹೆಚ್ಚಿನ ಪೋಷಕರು ತಮ್ಮ ಮಗುವನ್ನು ಈ ರೀತಿ ಮಲಗಿಸಲು ಭಯ ಪಡುತ್ತಾರೆ. ಮಗುವನ್ನು ಅಂಗಾತ ಮಲಗಿಸುವುದರಿಂದ ಅವರಿಗೆ ಉಸಿರಾಟದ ಸಮಸ್ಯೆಗಳಾಗುತ್ತವೆ ಎಂಬುದು ಅವರ ಕಾಳಜಿಯಾಗಿದೆ. ಆದರೆ ಇದು ತಪ್ಪು ಗ್ರಹಿಕೆ. ಅಂಗಾತ ಮಲಗಿಸುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
ಮಗುವನ್ನು ಅವರ ಹೊಟ್ಟೆಯ ಮೇಲೆ ಮಲಗಿಸುವುದು ಯಾವಾಗ ಸುರಕ್ಷಿತ?
ಕೆಲವು ತಜ್ಞರ ಪ್ರಕಾರ, ನಿಮ್ಮ ಮಗುವನ್ನು ಒಂದು ವರ್ಷ ತುಂಬುವವರೆಗೂ ಅಂಗಾತ ಮಲಗಿಸುವುದನ್ನು ನೀವು ಮುಂದುವರಿಸಬೇಕು. ಒಂದು ವೇಳೆ ಅವರು ನಿದ್ರೆಯಲ್ಲಿ ಹೊಟ್ಟೆಯ ಕಡೆಗೆ ತಿರುಗಿದರೆ, ನೀವು ಅವರನ್ನು ಬೆನ್ನಿನ ಕಡೆಗೆ ತಿರುಗಿಸಬೇಕು. 1 ನೇ ವರ್ಷಕ್ಕೆ ಕಾಲಿಟ್ಟ ನಂತರ, ಶಿಶುಗಳು ಸಾಮಾನ್ಯವಾಗಿ ಯಾರ ಸಹಾಯವಿಲ್ಲದೇ ತಮ್ಮಷ್ಟಕ್ಕೆ ತಿರುಗುತ್ತಾರೆ. ಏಕೆಂದರೆ ಅವರ ತಲೆ ಮತ್ತು ದೇಹಕ್ಕೆ ಬಲ ಬಂದಿರುತ್ತದೆ. ಅವುಗಳನ್ನು ಸುಲಭವಾಗಿ ನಿಯಂತ್ರಿಸಬಹುದು. ಆಗ ಹೊಟ್ಟೆಯ ಕಡೆಗೆ ಮಲಗಿದ್ದರೂ, ತಮಗೆ ಉಸಿರುಗಟ್ಟಿದ ಭಾವನೆ ಎದುರಾದರೆ ಸುಲಭವಾಗಿ ಆರಾಮದಾಯಕ ಸ್ಥಾನಕ್ಕೆ ಮರಳಬಹುದು.