ಡಾ. ರೆಡ್ಡೀಸ್ ಲ್ಯಾಬ್ ತಯಾರಿಸಿರುವ 2–ಡಿಜಿ ಔಷಧ ವಾಣಿಜ್ಯ ಬಳಕೆಗೆ ಲಭ್ಯ

ಹೈದರಾಬಾದ್‌,ಜೂ.28: ಇಲ್ಲಿನ ಡಾ. ರೆಡ್ಡೀಸ್ ಲ್ಯಾಬ್ ನ ಸಹಯೋಗದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ ಡಿಒ) ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂಕ್ಲಿಯರ್ ಮೆಡಿಸಿನ್‌ ಅಂಡ್ ಅಲೈಡ್ ಸೈನ್ಸಸ್ (ಐಎನ್‌ಎಂಎಎಸ್‌) ಪ್ರಯೋಗಾಲಯದಲ್ಲಿ ಕೋವಿಡ್ ಸೋಂಕಿತರಿಗಾಗಿ ಅಭಿವೃದ್ಧಿಪಡಿಸಿರುವ 2–ಡಯಾಕ್ಸಿ–ಡಿ–ಗ್ಲೂಕೋಸ್‌ (2–ಡಿಜಿ) ಔಷಧವನ್ನು ವಾಣಿಜ್ಯ ಬಳಕೆಗೆ ಬಿಡುಗಡೆ ಮಾಡಿರುವುದಾಗಿ ರೆಡ್ಡೀಸ್ ಲ್ಯಾಬ್ ಸೋಮವಾರ ಪ್ರಕಟಿಸಿದೆ.

ಡಾ. ರೆಡ್ಡೀಸ್ ಲ್ಯಾಬ್ ತಯಾರಿಸಿರುವ ಈ ಔಷಧವನ್ನು 2ಡಿಜಿ ಬ್ರ್ಯಾಂಡ್ ಹೆಸರಿನಲ್ಲಿ ವಾಣಿಜ್ಯಿಕವಾಗಿ ಮಾರಾಟ ಮಾಡಲಾಗುತ್ತದೆ. ಪ್ರತಿ ಸ್ಯಾಚೆಟ್‌ನ ಗರಿಷ್ಠ ಬೆಲೆ ₹990 ಎಂದು ನಿಗದಿಪಡಿಸಲಾಗಿದೆ. ಸರ್ಕಾರಿ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ಔಷಧವನ್ನು ಪೂರೈಸಲಾಗುತ್ತದೆ. ಆರಂಭಿಕ ವಾರಗಳಲ್ಲಿ, ಕಂಪನಿಯು ಮಹಾನಗರಗಳು ಮತ್ತು ಮೊದಲ ಹಂತದ (ಎ ಗ್ರೇಡ್‌) ನಗರಗಳಲ್ಲಿನ ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಾರೆ. ನಂತರ ಭಾರತದ ಉಳಿದ ಭಾಗಗಳಿಗೆ ವಿಸ್ತರಿಸುವುದಾಗಿ ಔಷಧ ಕಂಪನಿ ಹೇಳಿದೆ.

ಸಾಧಾರಣ ಅಥವಾ ಗಂಭೀರವಾಗಿ ಕೋವಿಡ್‌–19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ, ತಜ್ಞ ವೈದ್ಯರ ಸಲಹೆ ಮೇರೆಗೆ, ಈಗಿರುವ ಆರೈಕೆಯ ಮಾನದಂಡಗಳನ್ನು ಅನುಸರಿಸಿ, ಸಹಾಯಕ ಚಿಕಿತ್ಸೆಯಾಗಿ ಈ ಔಷಧವನ್ನು ನೀಡಬಹುದು.

Exit mobile version