ಕೊಚ್ಚಿ ಹೋಯ್ತು ಕನಸು!! ರೈತರ ಜಮೀನಿಗೆ ನೀರು ನುಗ್ಗಿ ಲಕ್ಷಾಂತರ ರೂ ಬೆಳೆ ನಾಶ. ದಾವಣಗೆರೆ ಜಿಲ್ಲೆಯ ಅಂಗೋಡ್‌ ಹೋಬಳಿ ಮಂದಿ ಸಂಕಷ್ಟ ಕೇಳಿ

ಕೊಚ್ಚಿ ಹೋಯ್ತು ಕನಸು!! Rain flashed the dreams.

ಇದು ದಾವಣಗೆರೆ ಯ ಅಂಗೋಡ್‌ ಹೋಬಳಿಯಲ್ಲಿನ ಪ್ರವಾಹ ಪರಿಸ್ಥಿತಿಯ ದೃಶ್ಯ. ಸತತವಾಗಿ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸುತ್ತಮುತ್ತಲಿನ ನದಿ, ಹಳ್ಳ ಕೋಳ್ಳ, ಕೆರೆ ಕಟ್ಟೆಗಳೆಲ್ಲಾ ತುಂಬಿ ಹರಿಯುತ್ತಿವೆ.

ಇಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿರೋದ್ರಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಬೆಳೆದ ತೊಗರಿ, ಅವರೆ, ಮೆಕ್ಕೆಜೋಳದಂತಹ ಬೆಳೆಗಳು ಮಣ್ಣು ಸಮೇತ ಕೊಚ್ಚಿ ಹೋಗಿ ಸರ್ವನಾಶವಾಗಿವೆ.

ಸಾಲ ಸೋಲ ಮಾಡಿ, ಬೆವರು ಸುರಿಸಿ ಬೆಳೆದ ಬೆಳೆ ಈ ರೀತಿ ನೀರಲ್ಲಿ ಕೊಚ್ಚಿ ಹೋಗಿರೋದ್ರಿಂದ ರೈತರು ಬಹಳ ನಿರಾಶರಾಗಿದ್ದಾರೆ. ತಮ್ಮ ಕಣ್ಣ ಮುಂದೆಯೇ ಕನಸು ಕೊಚ್ಚಿ ಹೋಗಿರೋದ್ರಿಂದ  ರೈತರು ಆತಂಕಕೊಳ್ಗಾಗಿದ್ದಾರೆ. ಈಗಾಗಲೇ ಕೊರೋನಾ ಲಾಕ್‌ಡೌನ್‌ನಿಂದಾಗಿ ನೊಂದ ರೈತರಿಗೆ ಬೆಳೆ ನಾಶ ಭರ ಸಿಡಿಲಿನಂತೆ ಅಪ್ಪಳಿಸಿದೆ.

ಇಂದಿಗೆ ನಾಲ್ಕು ದಿನಗಳಾದರೂ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.  ದಾವಣಗೆರೆ ತಾಲೂಕಿನ ಅಂಗೋಡ್‌ ಹೋಬಳಿಯ, ಕಂಡನಕೋವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರನಕಟ್ಟೆ ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅವಾಂತರಕ್ಕೆ ರೈತರು ತತ್ತರಿಸಿ ಹೋಗಿದ್ದಾರೆ.

ಇಲ್ಲಿನ ರೈತರ ಹತ್ತಾರು ಎಕರೆ ಕೃಷಿ ಭೂಮಿಯೊಳಗೆ ರಭಸವಾಗಿ ಪ್ರವಾಹದ  ನೀರು ನುಗ್ಗಿದ ಪರಿಣಾಮ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿಯ ಬೆಳೆ ನಾಶವಾಗಿದೆ.

ರೈತರ ಜಮೀನಿನೊಳಗೆ ರಭಸದ ನೀರು ನುಗ್ಗಲು ಮುಖ್ಯ ಕಾರಣ, ಜಮೀನಿನ ಪಕ್ಕದಲ್ಲಿ ಒಡ್ಡು ಅಥವಾ ಬದು ನಿರ್ಮಾಣ ಮಾಡದೇ ಇರುವುದು. ಇದರಿಂದಾಗಿ ಮಳೆ ನೀರು ಜಮೀನಿಗೆ ನುಗ್ಗುತ್ತಿದೆ. ಲಕ್ಷಾಂತರ ರೂಪಾಯಿಯ ಬೆಳೆ ನಾಶವಾಗುತ್ತಿದೆ ಎಂಬುದು ರೈತರ ಗೋಳಾಗಿದೆ.

ರೈತರ ಬೆಳೆ ನಾಶವಾದರೂ ಯಾವುದೇ ಅಧಿಕಾರಿಗಳಾಗಲಿ, ಅಥವಾ ಯಾವುದೇ ಶಾಸಕರಾಗಲೀ, ಇಲ್ಲಿನ ರೈತರ ಜಮೀನಿಗೆ ಭೇಟಿಯೂ ನೀಡಲಿಲ್ಲ. ಪರಿಹಾರವನ್ನು ನೀಡುವ ಆಶ್ವಾಸನೆಯನ್ನೂ ನೀಡಲಿಲ್ಲ ಎಂಬುದು ರೈತರ ನೋವಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಶಾಸಕರು ರೈತರ ಜಮೀನಿಗೆ ಭೇಟಿ ನೀಡಿ ನೊಂದ ರೈತರ ಸಮಸ್ಯೆಯನ್ನು ಆಲಿಸಲಿ ಎಂಬುದು ವಿಜಯಟೈಮ್ಸ್‌ನ ಆಶಯವಾಗಿದೆ.

ದಾವಣಗೆರೆಯಿಂದ ಸಿಟಿಜನ್‌ ಜರ್ನಲಿಸ್ಟ್‌ ಮಧು, ವಿಜಯಟೈಮ್ಸ್‌

Exit mobile version