ಬೆಂಗಳೂರು: ಮಾದಕ ವಸ್ತುಗಳ ದಂಧೆಯಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕೂಡಾ ಶಾಮೀಲಾಗಿರುವ ಆರೋಪಗಳಿವೆ. ಅವರ ಮೇಲೆ ಯಾವ ಕ್ರಮಕೈಗೊಳ್ಳಲಾಗಿದೆ? ಅವರಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ? ಎಷ್ಟು ಜನರು ಶಿಕ್ಷೆಗೊಳಗಾಗಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಸರ್ಕಾರದ ಕಿವಿಹಿಂಡಿರುವ ಸಿದ್ದರಾಮಯ್ಯ,”ಡ್ರಗ್ಸ್ ಜಾಲದ ವಿರುದ್ಧ ಮುಖ್ಯಮಂತ್ರಿಗಳು ನಿರ್ದಾಕ್ಷಿಣ ಕ್ರಮ ತೆಗೆದುಕೊಳ್ಳಬೇಕು. ಬಂಧಿತರಲ್ಲಿ ಕೆಲವರಿಗೆ ಬಿಜೆಪಿ ಪಕ್ಷದ ಜೊತೆಗೂ ಸಂಬಂಧ ಇದೆಯೆಂದು ಹೇಳಲಾಗುತ್ತಿದ್ದು, ಕೆಲವು ಸಚಿವರು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸುತ್ತಿರುವ ಆರೋಪ ಕೇಳಿಬರುತ್ತಿದೆ. ಇದಕ್ಕೆ ಅವಕಾಶ ನೀಡಬಾರದು” ಎಂದು ಮನವಿ ಮಾಡಿದ್ದಾರೆ.
ಅಲ್ಲದೇ, ಕಳೆದ 10 ವರ್ಷಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮಾದಕವಸ್ತು ಸೇವನೆ/ಮಾರಾಟದ ಎಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ? ಅವರ ಹೆಸರುಗಳೇನು? ಶಿಕ್ಷೆಯ ಪ್ರಮಾಣ ಎಷ್ಟು? ಮಾದಕ ವಸ್ತುಗಳು ಎಲ್ಲಿಂದ ಸರಬರಾಜು ಆಗುತ್ತಿವೆ? – ಈ ಎಲ್ಲ ವಿವರ ಕೇಳಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.