ಬೃಹದಾಕಾರದ ಅರಳಿ ಮರಕ್ಕೆ ಕೊಡಲಿ ಪೆಟ್ಟು: ಕಡಿದ ಮರದ ಬುಡಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಪರಿಸರ ಪ್ರೇಮಿಗಳು

ಮೈಸೂರು, ಮಾ. 03: ಪರಿಸರ ಸಂರಕ್ಷಣೆಗೆ ಮನುಷ್ಯರ ಕೊಡುಗೆ ಅತ್ಯಗತ್ಯ . ದಿನದಿಂದ ದಿನಕ್ಕೆ ಮರಕಡಿಯೋ ಚಾಳಿ ಎಲ್ಲೆಡೆ ಹೆಚ್ಚಾಗ್ತಿದೆ.

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಕಳೆದ ಕೆಲವು ವರ್ಷಗಳಿಂದ ಮರಗಳ ಮಾರಣಹೋಮವೇ ನಡೆದು ಹೋಗ್ತಿದೆ. ಆಧುನೀಕರಣದ ಗುಂಗಲ್ಲಿ ಜನರು ಪರಿಸರ ಸಂರಕ್ಷಣೆಯ ಹೊಣೆಯನ್ನೇ ಮರೆತಿದ್ದಾರೆ . ಅರಮನೆ ನಗರಿ ಮೈಸೂರು ಕಾಂಕ್ರೀಟ್​ ಕಾಡಾಗಿ ಮಾರ್ಪಾಡಾಗುತ್ತಿದೆ.

ಮೈಸೂರಿನ ಶ್ರೀರಾಂಪುರದ BEML ದೇವಸ್ಥಾನದ ಮುಂಭಾಗವಿದ್ದ ಬೃಹತ್ ಅರಳಿ ಮರವನ್ನು ಕತ್ತರಿಸಿರೋದು ಇಲ್ಲಿನ ನಿವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ . ಇದನ್ನ ಖಂಡಿಸಿ, ಶ್ರೀರಾಂಪುರದ ಜನತೆ ಮೌನಾಚರಿಸಿ ಪ್ರತಿಭಟಿಸಿದ್ರು.

‘ನನ್ನ ಸಾವಿಗೆ ಮನುಷ್ಯರೇ ಕಾರಣ’ ಎಂಬ ಫಲಕವನ್ನು, ಕಡಿದಿರುವ ಮರದ ಮೇಲಿಟ್ಟು ಪ್ರತಿಭಟನೆ ನಡೆಸಿ, ಬಳಿಕ ಮರಕ್ಕೆ ಪೂಜೆ ಸಲ್ಲಿಸಿದ್ರು. ಈ ವೇಳೆ ಕೆಲ ನಿವಾಸಿಗಳು ಭಾವುಕರಾದ್ರು. ಅರಳಿ ಮರ ಇದ್ದ ಕೆಲ ಅಳತೆ ದೂರದಲ್ಲೇ ಇದ್ದ ಮನೆಯೊಳಗೆ ಅದರ ಬೇರ ನುಗುತ್ತಿತ್ತು . ಹೀಗಾಗಿ ಆ ಮನೆಯ ಮಾಲೀಕರು ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ರು. ದೂರು ಪರಿಗಣಿಸಿದ ಅರಣ್ಯಾಧಿಕಾರಿಗಳು ಮರವನ್ನ ಕಡಿದಿದ್ದಾರೆ. ಇದು ಆ ಭಾಗದ ಅನೇಕ ನಿವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಪರ್ಯಾಯ ಮಾರ್ಗ ಬಳಸದೇ ಇಡೀ ಮರವನ್ನ ಕಡಿದಿರೋದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ಬಿಸಲಿನಲ್ಲಿ ನೂರಾರು ಜನರು ಪ್ರತಿನಿತ್ಯ ಈ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ರು. ಈಗ ಮರ ಕಡಿದಿರೋದ್ರಿಂದ ಹಲವು ಜನರು ಬೇಸರಗೊಂಡಿದ್ದಾರೆ . ಇನ್ನು ಮೌನ ಪ್ರತಿಭಟನೆಯಲ್ಲಿ ಪರಿಸರವಾದಿ ಭಾನು ಮೋಹನ್ ಮತ್ತು ಕೆಲವು ಕನ್ನಡ ಪರ ಸಂಘಟನೆಗಳು ಭಾಗಿಯಾಗಿದ್ದವು.

Exit mobile version