ಕೋವಿಡ್ ಹೊಡೆತಕ್ಕೆ ಸಿಲುಕಿದ ವಲಯಗಳಿಗೆ ಎಂಟು ಪ್ರಮುಖ ನಿರ್ಧಾರ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ,ಜೂ.28: ಕೋವಿಡ್ ಹೊಡೆತಕ್ಕೆ ಸಿಲುಕಿ ನಲುಗಿರುವ ಭಾರತವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಂಟು ಪ್ರಮುಖ ನಿರ್ಧಾರಗಳನ್ನು ಘೋಷಿಸಿದ್ದಾರೆ.

ರಾಜಧಾನಿ ದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖಚಿತ ಸಾಲ ಯೋಜನೆಯಡಿ ಕೋವಿಡ್ -19 ಪೀಡಿತ ವಲಯಗಳಿಗೆ ಪ್ರಮುಖ ಪರಿಹಾರವಾಗಿ 1.1 ಲಕ್ಷ ಕೋಟಿ ರೂ. ಮೀಸಲಿರಿಸುವುದಾಗಿ ತಿಳಿಸಿದರು. ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರೂ. ಮತ್ತು ಇತರ ಕ್ಷೇತ್ರಗಳಿಗೆ ಹೆಚ್ಚುವರಿ 60,000 ಕೋಟಿ ರೂ. ನಿಡುವುದಾಗಿ ಅವರು ತಿಳಿಸಿದರು.

ನೂರು ಕೋಟಿ ರೂ. ಸಾಲವನ್ನು ಆರೋಗ್ಯ ಕ್ಷೇತ್ರಕ್ಕೆ ಶೇ. 7.95ರಷ್ಟು ಬಡ್ಡಿಯಲ್ಲಿ ನೀಡಲಾಗುವುದು. ಕೋವಿಡ್ ಸೋಂಕಿನ ಮೂರನೇ ಅಲೆಯನ್ನು ನಿಯಂತ್ರಿಸಲು ಇದು ನೆರವಾಗುತ್ತದೆ ಎಂದು ತಿಳಿಸಿದರು.

ತುರ್ತು ಸಾಲ ಯೋಜನೆಯಡಿ ಎಂಎಸ್‌ಎಂಇ ಕ್ಷೇತ್ರಕ್ಕೆ ಬಡ್ಡಿ ರಹಿತ ಸಾಲ ನೀಡುವುದಾಗಿ ಘೋಷಿಸಿದ ಅವರು, 25 ಲಕ್ಷ ಸಣ್ಣ ಉದ್ಯಮಿಗಳಿಗೆ ನೆರವಾಗುವಂತೆ ತಲಾ 1.25 ಲಕ್ಷ ಸಾಲ ನೀಡಲಾಗುವುದು. ಪ್ರವಾಸೋದ್ಯಮದ ಪುನಶ್ಚೇತನಕ್ಕಾಗಿ ಟೂರಿಸಂ ಏಜೆನ್ಸಿಗಳಿಗೆ ಹತ್ತು ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಜೊತೆಗೆ ಗೈಡ್‌ಗಳಿಗೆ ಒಂದು ಲಕ್ಷ ರೂ. ಸಾಲ ನೀಡುವುದಾಗಿ ಘೋಷಿಸಿದರು.

Exit mobile version