ಎಳನೀರಿನಲ್ಲಿದೆ ಸಮೃದ್ಧ ಪೋಷಕಾಂಶ

ಎಳನೀರು ನಮ್ಮ ದೇಹಕ್ಕೆ ಉತ್ತಮ ಪಾನೀಯವಾಗಿದೆ. ನಿತ್ಯ ಎಳನೀರನ್ನು ಕುಡಿಯುವುದರಿಂದ ಕಿಡ್ನಿಯು ಆರೋಗ್ಯವಾಗುವುದು, ಮೂತ್ರಪ್ರಮಾಣವನ್ನು ಹೆಚ್ಚಿಸಿ ದೇಹದ ಕಲ್ಮಶವನ್ನು ಹೋಗಲಾಡಿಸಿ, ದೇಹವನ್ನು ಆರೋಗ್ಯಯುತವಾಗಿ ಕಾಪಾಡುತ್ತದೆ.

ಎಳನೀರು ಥೈರಾಯ್ಡ್ ಗ್ರಂಥಿಯ ಸ್ರವಿಕೆಗೆ ಪ್ರಚೋದನೆ ನೀಡುತ್ತದೆ. ಕ್ಯಾಲ್ಸಿಯಂ, ಮೆಗ್ನೇಶಿಯಂ, ಪೊಟಾಶಿಯಂ, ಸೋಡಿಯಂ ಮುಂತಾದ ಅಂಶಗಳನ್ನು ದೇಹಕ್ಕೆ ನೀಡುತ್ತದೆ. ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ  ಎಳನೀರು ಕುಡಿದರೆ ಬಾಯಾರಿಕೆ ನಿಂತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಎಳನೀರಿನಲ್ಲಿ ಜೀರ್ಣರಸಗಳಿಗೆ ಪೂರಕವಾದ ಕಿಣ್ವಗಳಿರುವುದರಿಂದ ಕೊಬ್ಬನ್ನು ಕರಗಿಸಿ ದೇಹವನ್ನು ಹಗುರಗೊಳಿಸುತ್ತದೆ.

ವಾಂತಿ ಭೇದಿಯಂತಹ ತೊಂದರೆಯಾದಲ್ಲಿ ತಕ್ಷಣವೇ ಎಳನೀರನ್ನು ಸೇವಿಸುವುದರಿಂದ ದೇಹಕ್ಕೆ ಅನುಕೂಲವಾಗುತ್ತದೆ. ಇದರಲ್ಲಿರುವ ಎಲೆಕ್ಟ್ರೋಲೈಟ್ ಅಂಶ ದೇಹವನ್ನು ಸಹಜ ಸ್ಥಿತಿಗೆ ತರುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಬರುವ ತಲೆನೋವಿಗೆ ಹಾಗೂ ಮೈಗ್ರೇನ್ ತಲೆನೋವು ಕಾಡುತ್ತಿರುವಾಗ ಎಳನೀರನ್ನು ಕುಡಿದರೆ ತಲೆನೋವು  ಶಮನಗೊಳ್ಳುತ್ತದೆ. ದಿನಕ್ಕೊಂದು ಎಳನೀರು ಕುಡಿದರೆ ದೇಹವು ತಂಪಾಗಿರುತ್ತದೆ. ಅಜೀರ್ಣವಾದಾಗ ಹೊಟ್ಟೆ ಸರಿ ಇರುವುದಿಲ್ಲ ಆಮ್ಲೀಯತೆ ಹೆಚ್ಚಾಗಿ ಹೊಟ್ಟೆಯಿಂದ ಹುಳಿತೇಗು ಬರುತ್ತದೆ ಇದಕ್ಕೆ ಎಳನೀರು ಅತ್ಯುತ್ತಮ ಪಾನೀಯವಾಗಿದೆ. ಹೊಟ್ಟೆಉರಿ, ಎದೆ ಉರಿಯಂತಹ ಸಮಸ್ಯೆಗೆ ಎಳನೀರು ರಾಮಬಾಣವಾಗಿದೆ.

ಬಳಲಿರುವ ದೇಹಕ್ಕೆ ಪುನಶ್ಚೇತನ ನೀಡಲು ಹೆಚ್ಚಿನ ಖನಿಜಗಳಿಂದ ಸಮೃದ್ದಿಯಾಗಿರುವ ಎಳನೀರು ಅತೀ ಅಗತ್ಯವಾದ ಪಾನೀಯವಾಗಿದೆ. ಎಳನೀರು ದೇಹಕ್ಕೆ ಅದ್ಭುತವಾದ ಆಹಾರವಾಗಿದೆ ಮತ್ತು ಇದರ ಗಂಜಿಯಂತೂ ಅತೀ ಸುಲಭವಾಗಿ ಜಠರದಲ್ಲಿ ಕರಗುವ ಪರಿಪೂರ್ಣವಾಗಿ ದೇಹಕ್ಕೆ ಶಕ್ತಿ ನೀಡುವ ಆಹಾರವಾಗಿದೆ. ತೂಕ ಇಳಿಸುವವರು ಪ್ರತೀ ದಿನ ಬೆಳಗ್ಗೆಒಂದು ಹೊತ್ತು  ಎಳನೀರು ಹಾಗೂ ಅದರ ಗಂಜಿ ಇಷ್ಟನ್ನೇ ಸೇವಿಸುತ್ತಾ ಬಂದರೆ ತೂಕ ಇಳಿಕೆಯಾಗುತ್ತದೆ.

Exit mobile version