ರಸ್ತೆಗಳು(Road) ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಕಾರಣಕ್ಕೆ ಬಹುತೇಕ ದೇಶಗಳಲ್ಲಿ ಹೆದ್ದಾರಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಭಾರತದಲ್ಲಿಯೂ(India) ಹಲವು ನಗರಗಳ ನಡುವೆ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಈ ಹೆದ್ದಾರಿಗಳು ನಗರಗಳ ನಡುವಿನ ಸಂಚಾರ ಅವಧಿಯನ್ನು ಕಡಿಮೆ ಮಾಡುತ್ತವೆ. ದೇಶದಲ್ಲಿ ಇತ್ತೀಚೆಗೆ ಹಲವಾರು ಹೆದ್ದಾರಿಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ನಡುವೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ(Nithin Gadkari), ವಿಭಿನ್ನ ಪ್ರಯೋಗವೊಂದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ, ಅದುವೇ ಎಲೆಕ್ಟ್ರಿಕ್ ಹೆದ್ದಾರಿ(Electric Highway).
ಹೌದು, ಭಾರತದ ಮೊದಲ ಎಲೆಕ್ಟ್ರಿಕ್ ಹೆದ್ದಾರಿ ಶೀಘ್ರದಲ್ಲೇ ದೆಹಲಿ(Delhi) ಹಾಗೂ ಜೈಪುರ(Jaipur) ನಗರಗಳ ನಡುವೆ ಆರಂಭವಾಗಲಿದೆ. ವಿದ್ಯುತ್ ಹೆದ್ದಾರಿ ಅಥವಾ ಎಲೆಕ್ಟ್ರಿಕ್ ಹೈವೇ ಎಂದರೆ, ಸಾಮಾನ್ಯವಾಗಿ ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ರಸ್ತೆ ಮೇಲೆ ಇರುವ ವಿದ್ಯುತ್ ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜು ಆಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳು ದೆಹಲಿ – ಜೈಪುರ ನಗರಗಳ ನಡುವೆ ಎಲೆಕ್ಟ್ರಿಕ್ ಹೆದ್ದಾರಿ ಸ್ಥಾಪಿಸಲು ವಿದೇಶಿ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ದೆಹಲಿ – ಜೈಪುರ ನಗರಗಳು ಮಾತ್ರವಲ್ಲದೆ, ದೆಹಲಿ – ಮುಂಬೈ ನಗರಗಳ ನಡುವೆಯೂ ಎಲೆಕ್ಟ್ರಿಕ್ ಹೆದ್ದಾರಿಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಸ್ವೀಡಿಷ್ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಭಾರತದ ಹೆದ್ದಾರಿ ವಲಯದಲ್ಲಿ ವಿದೇಶಿ ಹೂಡಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ನಿರ್ಮಿಸಲು ಈ ಹಿಂದೆ ನಿತಿನ್ ಗಡ್ಕರಿ, ಯುರೋಪಿಯನ್ ಒಕ್ಕೂಟಕ್ಕೆ ಆಹ್ವಾನ ನೀಡಿದ್ದರು ಎಂಬುದು ಗಮನಾರ್ಹ.
ದೆಹಲಿ – ಜೈಪುರ ನಗರಗಳ ನಡುವೆ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಿಸುವುದು ನನ್ನ ಕನಸು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದು ಉದ್ದೇಶಿತ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ನಾವು ವಿದೇಶಿ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದರು.
ಇನ್ನು, ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಜನರನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ತನ್ನ ಫೇಮ್ 2 ಯೋಜನೆಯಡಿಯಲ್ಲಿ ಸಬ್ಸಿಡಿ ನೀಡುತ್ತದೆ.
ಜೊತೆಗೆ ಕೆಲವು ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ(Subsidy) ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡುತ್ತವೆ.
- ಪವಿತ್ರ