ಎಲ್ಲರ ಆರೋಗ್ಯ ರಾಜ್ಯ ಸರ್ಕಾರದ ಗುರಿ, ಕಾಳಜಿ: ಸುಧಾಕರ್

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಕಂದಾಯ, ಗೃಹ ಇಲಾಖೆಯ ಸಹಕಾರ ಅಗತ್ಯವಾಗಿದೆ. ಸಮನ್ವಯತೆ ಸಾಧಿಸಿ, ಎಲ್ಲರ ಸಹಕಾರ ಪಡೆದು ಕಟ್ಟುನಿಟ್ಟಿನ ಜಾರಿಗೆ ಕ್ರಮಕೈಗಳ್ಳುತ್ತೇವೆ. ಎಲ್ಲರ ಆರೋಗ್ಯ ರಾಜ್ಯ ಸರ್ಕಾರದ ಗುರಿ, ಚಿಂತನೆ, ಕಾಳಜಿಯಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಸೋಂಕು ಹರಡಲು ಬಿಡುವುದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಒಂದು ರೀತಿಯ ಸಂದಿಗ್ಧ ಪರಿಸ್ಥಿಯಲ್ಲಿ ಇದ್ದೇವೆ. ಪರಿಸ್ಥಿತಿ ಸುಧಾರಿಸಲು ಕೆಲವು ನಿರ್ಬಂಧಗಳನ್ನು ಸಡಿಲಿಸಿದ್ದು ಸದುದ್ದೇಶದಿಂದ ಅಷ್ಟೇ. ಹಾಗಂತ ಕೇವಲ ಕಾನೂನೇ ಎಲ್ಲವನ್ನು ನಿಯಂತ್ರಿಸುತ್ತೇ ಅನ್ನೊ ಮನಸ್ಥಿತಿಯಿಂದ ಹೊರಬನ್ನಿ. ಸ್ವಯಂ ನಿರ್ಬಂಧ, ಸಾಮಾಜಿಕ ಕಳಕಳಿಯಿಂದ ವರ್ತಿಸಿ. ಮಾರ್ಚ್ ಅಂತ್ಯದವರೆಗೆ ಕಟ್ಟೆಚ್ಚರ ಅಗತ್ಯವಾಗಿದೆ. ಆತಂಕ ಇದ್ದೇ ಇದೆ ಎಂದು ಹೇಳಿದ್ದಾರೆ.

ಕೊರೊನಾ ಎರಡನೇ ಅಲೆ ತಡೆಯಬೇಕು. ಮಹಾರಾಷ್ಟ್ರ, ಕೇರಳದಿಂದ ಬರುವವರ ಬಗ್ಗೆ ಆತಂಕ ಗುಮಾನಿ ಇದೆ. ಆ ಬಗ್ಗೆ ಕೂಡ ಎಚ್ಚರಿಕೆ ವಹಿಸಿದ್ದೇವೆ. ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ. ಕೇರಳದಲ್ಲಿ ಕೊರೊನಾ ಕಡೆಮೆಯಾಗಿಲ್ಲ. ನಿನ್ನೆ 4,505 ಪ್ರಕರಣಗಳು ದಾಖಲಾಗಿವೆ. 59,816ಜನ ಪ್ರಕರಣಗಳು ಸಕ್ರಿಯವಾಗಿವೆ ಶೆ.15ರಷ್ಟು ಜನ ಸಾವನ್ನಪ್ಪಿದ್ದಾರೆ ಕೇರಳ, ಮಹಾರಾಷ್ಟ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತವೆ. ನಿನ್ನೆ ಒಂದು ದಿನ 44 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಎಚ್ಚರವನ್ನು ವಹಿಸಬೇಕಾಗಿದೆ ಎಂದರು.

ಸುಮಾರು 10 ಜಿಲ್ಲೆಗಳು 2 ರಾಜ್ಯಗಳ ಗಡಿಯನ್ನು ಹಂಚಿಕೊಳ್ಳುತ್ತೇವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು, ಚಾಮರಾಜನಗರ, ಉಡುಪಿ, ಬೆಳಗಾವಿ, ಹುಬ್ಬಳ್ಳಿ, ಕೊಡಗು ಇಷ್ಟು ಜಿಲ್ಲೆಗಳ ಮೂಲಕವಾಗಿ 2 ರಾಜ್ಯದ ಜನರು ಬರಲು ಸಾಧ್ಯವಾಗುತ್ತದೆ. ವಿಮಾನದಲ್ಲಿ ಬರುವಂತವರಿಗೆ ಹೇಗೆ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬುದನ್ನು ಯೋಚಿಸಿದ್ದೇವೆ ಎಂದರು.

ರಾಜ್ಯದ ಗಡಿ ದಾಟಿ ಬರುವಾಗ ಆರ್ಟಿಪಿಸಿಆರ್ ಮೆಡಿಕಲ್ ಸೆರ್ಟಿಫಿಕೆಟ್ನೊಂದಿಗೆ ಬರಬೇಕು. ಇದನ್ನು ಅನುಷ್ಠಾನಕ್ಕೆ ತರಲು ಆರೋಗ್ಯ ಇಲಾಖೆ, ಪೊಲೀಸ್, ಜಿಲ್ಲಾಢಳಿತ ನಮ್ಮ ಜೊತೆಗೆ ಇರಬೇಕು. ಗೃಹ ಮತ್ತು ಕಂದಾಯ ಇಲಾಖೆ ಸಚಿವರ ಜೊತೆಯಲ್ಲಿ ಈ ಕುರಿತಾಗಿ ಸಭೆ ಮಾಡುತ್ತೇವೆ ಎಂದು ಹೇಳಿದರು.

ಮರಾಣಾಂತಿಕವಾದ ಕಾಯಿಲೆಗೆ ಕೆಲವೇ ಸಮಯದಲ್ಲಿ ಲಸಿಕೆ ಕಂಡುಹಿಡಿದು ಉಚಿತವಾಗಿ ಕೊಡುವಂತೆ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಮಾಡಿದೆ. ವಿಶೇಷವಾದ ಗಮನವನ್ನು ಕೊರೊನಾ ಲಸಿಕೆ ಸಂಶೋಧನೆಗೆ ಕೊಟ್ಟಿದ್ದಾರೆ. ಎಲ್ಲರಿಗೂ ಲಸಿಕೆ ಲಭ್ಯವಾಗಬೇಕು ಎನ್ನುವ ಯೋಚನೆಯಾಗಿದೆ. ಆದರೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರೂ ಕೂಡ ಲಸಿಕೆಯನ್ನು ತೆಗೆದುಕೊಂಡಿಲ್ಲ. ಕೇವಲ ಶೆ.51 ರಷ್ಟು ಮಂದಿ ಮಾತ್ರ ತೆಗೆದುಕೊಂಡಿದ್ದಾರೆ.

ಶೆ.48 ಜನ ಇನ್ನೂ ಲಸಿಕೆಯನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ.
ಲಸಿಕೆ ತೆಗೆದುಕೊಂಡವರಿಗೆ ಮತ್ತೆ ಸೋಂಕು ಬಂದರೆ ಸಾವು ಆಗುವುದು ತುಂಬಾ ವಿರಳ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಸರ್ಕಾರ ಉಚಿತವಾಗಿ ಲಸಿಕೆ ಕೊಡುತ್ತಿದ್ದರು ಜನರು ಬೇಜವಾಬ್ದಾರಿತನವನ್ನು ಮಾಡುತ್ತಿದ್ದಾರೆ. ಈ ಬೇಜವಾಬ್ದಾರಿತನ ಶೋಭೆ ತರುವುದಿಲ್ಲ ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂದು ಇದೇ ವೇಳೆ ಸಚಿವರು ಮನವಿ ಮಾಡಿದ್ದಾರೆ.

ಎಲ್ಲರ ಆರೋಗ್ಯ ರಾಜ್ಯ ಸರ್ಕಾರದ ಗುರಿ, ಚಿಂತನೆ, ಕಾಳಜಿಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರು, ನರ್ಸ್, ಪ್ಯಾರಾಮೇಡಿಕಲ್ ವಿದ್ಯಾರ್ಥಿಗಳು ಲಸಿಕೆ ತೆಗೆದುಕೊಳ್ಳಿ ಬೇರೆಯವಗೆ ಮಾದರಿಯಾಗಿ ವೈದ್ಯರಾದ ನಾವು ಮಾದರಿಯಾಗಿರಬೇಕು. ಸರ್ಕಾರದಿಂದ ಪ್ರಕಟಗೊಳ್ಳುವ ಮಾಹಿತಿ ಸತ್ಯ, ಲಸಿಕೆ ಕಂಡು ಹಿಡಿದಿದ್ದು ನಮ್ಮ ಸೌಭಾಗ್ಯ. ಹೀಗಿದ್ದರೂ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ದುರದೃಷ್ಟಕರ. ಬೇಜವಾಬ್ದಾರಿತನ ತೊರಿಸೋದು, ಆಲಸ್ಯ ಮಾಡುವುದು ಯಾರಿಗೂ ಶೋಭೆ ತರಲ್ಲ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಮುಂದೆ ಬಂದು ಲಸಿಕೆ ತೆಗೆದುಕೊಳ್ಳಲು ಮನವಿ ಮಾಡಿದರು.

ಇಂದ್ರಧನುಷ್ 3.ಓ ಯೋಜನೆಯ ಜಾರಿಗೆ ತರುತ್ತೇವೆ. ಎರಡು ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡುವ ಲಸಿಕೆಯಾಗಿದೆ. ಇದೇ ತಿಂಗಳ 22, 23, 24 ರಂದು ಇಂದ್ರಧನುಷ್ 3.ಓ ಜಾರಿಗೊಳಿಸುತ್ತೇವೆ. ಬೆಂಗಳೂರು ನಗರ, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ ರಾಯಚೂರು, ವಿಜಯಪುರ ಸೇರಿದಂತೆ 13 ಜಿಲ್ಲೆಗಳಲ್ಲಿ ಜಾರಿ ಆಗತ್ತದೆ. ಏಳು ಕಾಯಿಲೆಗಳಿಗೆ ನೀಡುವ ಲಸಿಕೆ ಇದಾಗಿದ್ದು, ಸಾರ್ವಜನಿಕವಾಗಿ ಲಸಿಕೆ ಪಡೆಯದೇ ವಂಚಿತರಾಗುವವರನ್ನ ಗುರುತಿಸಿ ಲಸಿಕೆ ಹಾಕಲಾಗತ್ತೆದೆ ಎಂದಿದ್ದಾರೆ.

Exit mobile version