ಯುಎಸ್ ಓಪನ್ ಗೆದ್ದ ಎಮ್ಮಾ ರಡುಕಾನು

 ನ್ಯೂಯಾರ್ಕ್, ಸೆಪ್ಟೆಂಬರ್ 12: ಈ ಬಾರಿಯ ಮಹಿಳೆಯರ ಸಿಂಗಲ್ಸ್ ಯುಎಸ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ಎಮ್ಮಾ ರಡುಕಾನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 44 ವರ್ಷಗಳ ನಂತರ ಬ್ರಿಟನ್‌ನ ಆಟಗಾರ್ತಿಯೊಬ್ಬರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಂತಾಗಿದೆ.

ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದಿದ್ದ ಶ್ರೇಯಾಂಕ ರಹಿತ ಆಟಗಾರ್ತಿ ಬ್ರಿಟನ್‌ನ ೧೮ ವರ್ಷದ ಎಮ್ಮಾ ರಡುಕಾನು ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಎಮ್ಮಾ ವೃತ್ತಿಪರ ಟೆನಿಸ್‌ನಲ್ಲಿ ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದು ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಎಮ್ಮಾ ರಡುಕಾನುಗೆ ಕೆನಡಾದ ಆಟಗಾರ್ತಿ ಲೇಲಾ ಫೆರ್ನಾಂಡೀಸ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ರಡುಕಾನು 6-4, 6-3 ಅಂತರದಿಂದ ನೇರ ಸೆಟ್‌ಗಳ ಗೆಲುವು ಸಾಧಿಸಿದ್ದರು. ಇನ್ನು ಈ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲುವ ಮೂಲಕ 2004ರಲ್ಲಿ ಮರಿಯಾ ಶರಪೋವಾ ವಿಂಬಲ್ಡನ್ ಗೆದ್ದ ಬಳಿಕ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಅತಿ ಕಿರಿಯ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ರಡುಕಾನು ಪಾತ್ರರಾಗಿದ್ದಾರೆ.

Exit mobile version