ಚೆನ್ನೈ, ಫೆ. 15: ರವಿಚಂದ್ರನ್ ಅಶ್ವಿನ್(106) ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನ ಮೂರನೇ ದಿನದಂತ್ಯಕ್ಕೆ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ಗೆಲುವಿನತ್ತ ದಾಪುಗಾಲಿಟ್ಟಿದೆ.
ಇಲ್ಲಿನ ಚೆಪಾಕ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಆಟಗಾರರು ಪ್ರಾಬಲ್ಯ ಮೆರೆದರು. 2ನೇ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಮತ್ತು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅದ್ಭುತ ಬ್ಯಾಟಿಂಗ್ ಮಾಡಿದ್ದು ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 482 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿತ್ತು.
ಟೀಂ ಇಂಡಿಯಾ ನೀಡಿದ 482 ರನ್ ಗಳ ದಾಖಲೆಯ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭಿಕವಾಗಿ ರೊರ್ರಿ ಬರ್ನ್ಸ್ 25, ಡೂಮ್ ಸಿಬ್ಲೆ 3, ಜಾಕ್ ಲೀಚ್ ಶೂನ್ಯಕ್ಕೆ ಔಟಾಗಿದ್ದಾರೆ. 3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ನ ನಾಯಕ ಅಜೇಯ 2 ಮತ್ತು ಡಾನ್ ಲಾರೆನ್ಸ್ ಅಜೇಯ 19 ರನ್‌ಗಳಿಸಿ ಕಣದಲ್ಲಿದ್ದಾರೆ.
ಇದಕ್ಕೂ ಮುನ್ನ ದಿನದಾಟ ಆರಂಭಿಸಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಮಿಂಚಿದ ಅಶ್ವಿನ್ ಶತಕ(106) ಸಿಡಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್ ನೀಡಿದ ಕೊಹ್ಲಿ 62 ರನ್ ಪೇರಿಸಿದರೆ. ರೋಹಿತ್ ಶರ್ಮಾ 26, ಮೊಹಮ್ಮದ್ ಸಿರಾಜ್ 16 ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಜಾಕ್ ಲೀಚ್ ಮತ್ತು ಮೊಯಿನ್ ಅಲಿ ತಲಾ 4 ವಿಕೆಟ್ ಪಡೆದಿದ್ದಾರೆ.