ನಟನೆಯಲ್ಲಿ ಸೋಲನ್ನು ಕಂಡರೂ ಕುಗ್ಗದೆ, ಇಂದು ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಫಹಾದ್ ಫಾಸಿಲ್!

ದಕ್ಷಿಣ ಭಾರತದ(South India) ಸಿನಿಮಾಗಳಲ್ಲಿ(Cinema) ತನ್ನ ವಿಶಿಷ್ಟ ನಟನೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ನಟ(Actor) ಫಹಾದ್ ಫಾಸಿಲ್(Fahad Fazil) ಅವರು ಮಾಲಿವುಡ್ನ(Mollywood) ಖ್ಯಾತ ನಿರ್ದೇಶಕನ ಮಗನಾಗಿದ್ದರೂ, ಇವರ ಆರಂಭಿಕ ಸಿನಿ ಜರ್ನಿ ಹೂವಿನ ಹಾದಿಯಾಗಿರಲಿಲ್ಲ.

ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಎನಿಸಿದರೂ, ಇವರ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನೂ ಆಗಿರಲಿಲ್ಲ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಫಹಾದ್ಗೆ ಒಳ್ಳೆಯ ಸಿನಿಮಾ ಆಫರ್ಗಳು ಬರುತ್ತಿವೆ. ಬಹಳ ವಿಶಿಷ್ಟ ಎನಿಸುವಂತಹ ಪಾತ್ರಗಳನ್ನು ಮಾಡುತ್ತಿರುವ ಫಹಾದ್ ಅವರು ಸೌತ್ ಮತ್ತು ನಾರ್ತ್ ನಲ್ಲಿಯೂ ಹೆಸರುವಾಸಿಯಾಗುತ್ತಿದ್ದಾರೆ. ಅದರಲ್ಲಿಯೂ ಪುಷ್ಪ(Pushpa) ಸಿನಿಮಾ ಹಾಗೂ ತಮಿಳಿನ(Tamil) ವಿಕ್ರಮ್(Vikram) ಸಿನಿಮಾದಲ್ಲಂತೂ ಫಹಾದ್ ನಟನೆಗೆ ಮರುಳಾಗದವರೇ ಇಲ್ಲ.

ಹೀಗೆ ಫಹಾದ್ ಅವರ ಸಿನಿಮಾ ಜೀವನ ಮತ್ತೆ ಏರುಗತಿಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿದೆ. 2002 ರಲ್ಲಿ ಬಿಡುಗಡೆಯಾದ ಫಹಾದ್ ಅವರ ಮೊದಲ ಚಿತ್ರ, ‘ಕೈಯೆತುಂ ದೂರ್’ ಅನ್ನು ಅವರ ತಂದೆ ಫಾಸಿಲ್ ಅವರೇ ನಿರ್ದೇಶಿಸಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು, ಈ ಸೋಲಿನ ಬಗ್ಗೆ ಮಾತನಾಡಿದ ಫಹಾದ್ ತನ್ನ ತಂದೆಯನ್ನು ಸಮರ್ಥಿಸಿಕೊಂಡರು. “ನನ್ನ ವೈಫಲ್ಯಕ್ಕೆ ನನ್ನ ತಂದೆಯನ್ನು ದೂಷಿಸಬೇಡಿ. ಏಕೆಂದರೆ ಚಿತ್ರದ ಸೋಲಿಗೆ ಕಾರಣ ನಾನೇ, ನಾನು ನನ್ನದೇ ಆದ ತಯಾರಿಯಿಲ್ಲದೆ ನಟನೆಗೆ ಬಂದಿದ್ದೇನೆ” ಎಂದಿದ್ದರು.


ನಂತರದ ವರ್ಷಗಳಲ್ಲಿ ತಮ್ಮ ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ, ಫಹಾದ್ ಫಾಸಿಲ್ ಅವರು ಮಲಯಾಳಂನಲ್ಲಿ ಸಾಕಷ್ಟು ಹೆಸರು ಮಾಡಿದರು. ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ, ಈಗ ಅವರು ಇದೇ ಮೊದಲನೇ ಬಾರಿಗೆ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತ ಘೋಷಣೆಯಾಗಿದೆ.

ಯಾವ ಚಿತ್ರ, ಅವರ ಪಾತ್ರ ಏನು ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ವಿಧ ವಿಧವಾದ ಚರ್ಚೆಗಳಾಗುತ್ತಿವೆ. ಮೂಲಗಳ ಪ್ರಕಾರ ‘ಲೂಸಿಯಾ’ ಪವನ್ ಕುಮಾರ್ ಅವರು ಫಹಾದ್ ಫಾಸಿಲ್ ಅವರ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪವನ್ ಕುಮಾರ್ ಅವರು ಪುನೀತ್ ರಾಜ್ಕುಮಾರ್ ನಟನೆಯ ‘ದ್ವಿತ್ವ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಬೇಕಿತ್ತು.

ಆದರೆ, ಸಿನಿಮಾ ಆರಂಭಕ್ಕೂ ಮೊದಲೇ ಪುನೀತ್ ಅವರು ನಿಧನರಾದರು. ‘ದ್ವಿತ್ವ’ ಚಿತ್ರದ ಕಥೆಗೆ ಫಹಾದ್ ಫಾಸಿಲ್ ಅವರನ್ನು ಸೇರಿಕೊಂಡಿದ್ದಾರೆ ಎಂಬ ವದಂತಿಯೂ ಚಂದನವನದಲ್ಲಿ ಹರಿದಾಡುತ್ತಿದೆ.

Exit mobile version