ಭಾರತದಲ್ಲಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಿಲು ಇದೇ ಪ್ರಮುಖ ಕಾರಣ!

festival

ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ, ಈ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಹೀಗೆ ಎಲ್ಲಾ ಜಾತಿ- ಜನಾಂಗದ ಜನರು ಸೌಹಾರ್ದತೆಯಿಂದ ಕಲೆತು ಬದುಕುತಿದ್ದಾರೆ. ಅನೇಕ ಧರ್ಮಗಳ ಸಂಗಮವಾಗಿರುವ ನಮ್ಮ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿರಲು ಸಾಧ್ಯವೇ? ಮುಸ್ಲಿಂ ಬಾಂಧವರು ರಂಜಾನ್, ಬಕ್ರೀದ್ ಮುಂತಾದ ಹಬ್ಬಗಳನ್ನು ಆಚರಿಸಿದರೆ, ಕ್ರಿಶ್ಚಿಯನ್ನರು ಕ್ರಿಸ್ಮಸ್ ಗುಡ್ ಫ್ರೈಡೆ, ಹಿಂದೂಗಳು ಸಂಕ್ರಾಂತಿ, ಯುಗಾದಿ, ದೀಪಾವಳಿ ಮುಂತಾದ ಅನೇಕ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಹಬ್ಬಗಳ ಆಚರಣೆಯ ಮುಖ್ಯ ಉದ್ದೇಶವೇ ಸ್ವಲ್ಪ ಸಮಯದ ಮಟ್ಟಿಗಾದರೂ ಏಕತಾನತೆಯ ಬದುಕಿನಿಂದ ಹೊರಬರುವುದು. ಕೂಡು ಕುಟುಂಬದಲ್ಲಿ ಬಾಳಿ ಬದುಕಿದ ನಮ್ಮ ಹಿರಿಯರು ಹಬ್ಬಗಳನ್ನು ಆಚರಿಸುತ್ತಿದ್ದ ರೀತಿ ಅದ್ಬುತ! ಆದ್ರೆ ಈಗ ಕೂಡುಕುಟುಂಬಗಳು ಕಾಣಸಿಗುವುದೇ ಅಪರೂಪ. ಉದ್ಯೋಗದ ಸಲುವಾಗಿ ಅಥವಾ ವೈಮನಸ್ಸು ಕಾರಣವಾಗಿ ಕುಟುಂಬ ಸದಸ್ಯರು ಬೇರೆ ಬೇರೆಯಾಗಿ ವಾಸಿಸತೊಡಗಿದ್ದಾರೆ. ಆದರೆ ಎಲ್ಲರನ್ನು ಒಂದಾಗಿ ಬೆಸೆಯುವುದೇ ಈ ‘ಹಬ್ಬಗಳು’ ಎಂಬ ಆಚರಣೆಗಳು.

ವರ್ಷದ ಮೊದಲನೇ ಹಬ್ಬ ಸಂಕ್ರಾಂತಿ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಸಂದೇಶ ಸಾರುತ್ತದೆ. ನಂತರ ಬರುವುದೇ ಮಹಾಶಿವರಾತ್ರಿ, ಇದರ ವಿಶೇಷತೆಯೇ ರಾತ್ರಿ ಪೂಜೆ ಹಾಗು ಜಾಗರಣೆ. ಕತ್ತಲು ಎಂದರೆ ಅಜ್ಞಾನ, ಅಜ್ಞಾನವನ್ನು ತೊಡೆದು ಸುಜ್ಞಾನವನ್ನು ನೀಡು ಎಂದು ಭಗವಂತನಲ್ಲಿ ಬೇಡುವುದೇ ಶಿವರಾತ್ರಿಯ ಮಹತ್ವ. ಇನ್ನು ಯುಗಾದಿ, ಹಿಂದೂ ಪಂಚಾಂಗದ ಪ್ರಕಾರ ಹೊಸ ಸಂವತ್ಸರದ ಆರಂಭ. ಬೇವು-ಬೆಲ್ಲ ಹಂಚಿ, ಕಷ್ಟಗಳಿಗೆ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಂದೇಶ ಸಾರುವ ಹಬ್ಬ.

ವಿಧ ವಿಧ ಖಾದ್ಯಗಳನ್ನು ದೈವಗಳಿಗೆ ಅರ್ಪಿಸಿ ಅದನ್ನು ಸ್ವೀಕರಿಸುವಂತೆ ಪ್ರಾರ್ಥಿಸುತ್ತಾರೆ. ದೇವರ ಜೊತೆ ದೈವದ ಆಶೀರ್ವಾದವೂ ನಮ್ಮ ಮೇಲಿರಲಿ ಎಂದು ನಡೆಸುವ ಆಚರಣೆ ಇದು. ಇನ್ನು ಶ್ರಾವಣಮಾಸದಲ್ಲಿ ಹಬ್ಬಗಳ ಸರಮಾಲೆ. ಮೊದಲು ನಾಗರ ಪಂಚಮಿ, ನಾಗನಿಗೆ ಹಾಲೆರೆದು ಎಳನೀರು ಅಭಿಷೇಕ ಮಾಡಿ, ಅರಿಶಿನ,ಕೇದಿಗೆ ಅರ್ಪಿಸಿ ಪೂಜಿಸುತ್ತಾರೆ. ಅರಿಶಿನ ಎಲೆಯ ಕಡುಬು ಈ ಹಬ್ಬದ ವಿಶೇಷ. ವಿಶೇಷ ಔಷದೀಯ ಗುಣವುಳ್ಳ ಮರಗಳನ್ನು ಕಿಡಿಗೇಡಿಗಳಿಂದ ರಕ್ಷಿಸಲು, ನಮ್ಮ ಹಿರಿಯರು ಅಂತಹ ಮರಗಳಿರುವ ಸ್ಥಳವನ್ನು ನಾಗಬನ ಎಂಬ ಹೆಸರಿನಿಂದ ಕರೆದು, ನಾಗನ ವಾಸಸ್ಥಳ ಎಂಬ ನಂಬಿಕೆ ಮೂಡಿಸಿದರು.

ಇದರಿಂದ ಇಂದಿಗೂ ಅನೇಕ ಅಮೂಲ್ಯವಾದ ಔಷದೀಯ ಸಸ್ಯಗಳು ಉಳಿದುಕೊಂಡಿವೆ. ಇನ್ನು ನವರಾತ್ರಿ ಒಂಬತ್ತು ದಿನ ದೇವಿಯ ಒಂಬತ್ತು ರೂಪಗಳನ್ನು ಆರಾಧಿಸಲಾಗುತ್ತದೆ, ದೇವಿಯು ದುಷ್ಟ ಸಂಹಾರ ಮಾಡಿ ಶಿಷ್ಟ ರಕ್ಷಣೆ ಮಾಡಿದ ಸಂಭ್ರಮವೇ ವಿಜಯದಶಮಿ. ಲೋಕದಲ್ಲಿ ಕೆಟ್ಟದ್ದು ಎಂಬುದು ಯಾವತ್ತಿದ್ದರೂ ತಾತ್ಕಾಲಿಕ, ಸಾತ್ವಿಕತೆಗೇ ಗೆಲುವು ಎಂಬುದು ವಿಜಯದಶಮಿಯ ಸಂಕೇತ.

ಹೀಗೆ ಒಂದೊಂದು ಹಬ್ಬವೂ ಒಂದೊಂದು ಸಂದೇಶವನ್ನು ಸಾರುತ್ತದೆ. ಇಂದಿನ ಆಧುನಿಕತೆಯ ಬಿಡುವಿಲ್ಲದ ಕಾಲದಲ್ಲಿ ಹಬ್ಬ ಎಂದರೆ ಕೇವಲ ಸಿಹಿ ಅಡುಗೆ ಮಾಡಿ ಸವಿಯುವುದು ಎಂಬ ಮನೋಭಾವ ಅನೇಕರಲ್ಲಿದೆ! ಪ್ರತಿ ಹಬ್ಬದ ಹಿಂದಿನ ಇತಿಹಾಸ, ಆಚರಣೆಯ ಮಹತ್ವ, ಸಂಪ್ರದಾಯಗಳ ಹಿಂದಿನ ಅರ್ಥ ಇವುಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಮಹತ್ತರವಾದ ಜವಾಬ್ದಾರಿ ಹಿರಿಯರ ಮೇಲಿದೆ. ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸಲು, ಧನಾತ್ಮಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಬ್ಬಗಳೆಂಬ ಆಚರಣೆಗಳು ಬೇಕೇ ಬೇಕಲ್ಲವೇ?

Exit mobile version