ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ಆರೋಪಿ ಮೇಲೆ ಫೈರಿಂಗ್

ಮೈಸೂರು, ಫೆ. 10: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಈ ಸಂದರ್ಭ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ.

ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿ ಗೇಟ್‌ ಬಳಿ ಜ. 21ರಂದು ಈತ ಹಾಗೂ ಇನ್ನಿತರ ಆರೋಪಿಗಳು ಕೆಎಸ್‌ಆರ್‌ಟಿಸಿ ಬಸ್ ಚಾಲಕ ವೆಂಕಟೇಶ್‌ ಎಂಬುವವರಿಗೆ ರಸ್ತೆಯಲ್ಲಿ ಜಾಗ ಬಿಡಲಿಲ್ಲ ಎಂದು ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಈ ಕುರಿತ ವಿಡಿಯೊ ಸಾಕಷ್ಟು ವೈರಲ್‌ ಆಗಿತ್ತು. ಆರೋಪಿಗಳ ಸುಳಿವನ್ನು ಆಧರಿಸಿ ಇನ್‌ಸ್ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡವು ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಆರೋಪಿಗಳಾದ ಜಯಂತ್, ವಿಘ್ನೇಶ್ ಹಾಗೂ ದೀಪಕ್ ಅವರನ್ನು ಕರೆದುಕೊಂಡು ಬರುವಾಗ ಬಿಳಿಕೆರೆ ಸಮೀಪ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಜಯಂತ್ ಇಳಿದಿದ್ದಾನೆ.

ಹಂದನಹಳ್ಳಿ ಗ್ರಾಮದ ಗೇಟ್ ಬಳಿ ಕಾರಿನಿಂದ ಇಳಿದ ಆರೋಪಿ ಜಯಂತ್ ಹಾಗೂ ಇತರೆ ಆರೋಪಿಗಳು, ರಸ್ತೆಬದಿ ಬಿದ್ದಿದ್ದ ದೊಣ್ಣೆಯಿಂದ ಹೆಡ್‌ಕಾನ್‌ಸ್ಟೆಬಲ್ ರವಿ ಹಾಗೂ ಕಾನ್‌ಸ್ಟೆಬಲ್ ರವಿ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಬಿಳಿಕೆರೆ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಜಯಪ್ರಕಾಶ್‌ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಆರೋಪಿ ಜಯಂತ್ ಹಾಗೂ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಪೇದೆಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಗಳು ಜನವರಿ 22 ರಂದು ಕ್ಷುಲ್ಲಕ ಕಾರಣಕ್ಕೆ ಜಯಂತ್ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಮಾರಣಾಂತಿಕ ಹಲ್ಲೆಯ ದೃಶ್ಯ ಮೊಬೈಲ್‌‌ನಲ್ಲಿ ಸೆರೆಯಾಗಿತ್ತು. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಬಂಧಿತ ಆರೋಪಿ ಜಯಂತ್, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂಶ ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version