ಹಿಮಾಚಲ ಪ್ರದೇಶದಲ್ಲಿ ಮತ್ತೆ ಪ್ರವಾಹ: ನೆರವಿನ ಭರವಸೆ ನೀಡಿದ ಅಮಿತ್ ಷಾ

ಧರ್ಮಶಾಲಾ, ಜು. 12: ಉತ್ತರ ಭಾರತದಲ್ಲಿ ಮತ್ತೆ ಪ್ರವಾಹ ಉಂಟಾಗಿದ್ದು, ಅನೇಕ ಜಿಲ್ಲೆಗಳು ಸಂಪೂರ್ಣ ನೀರಿನಿಂದ ಆವೃತವಾಗಿವೆ. ಭಾರತದ ಪ್ರಮುಖ ಪ್ರವಾಸಿ ತಾಣಗಳಿರುವ ಘಟ್ಟ ಪ್ರದೇಶದ ರಾಜ್ಯವಾದ ಹಿಮಾಚಲಪ್ರದೇಶದಲ್ಲಿ ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದೆ.

ಹಿಮಾಚಲ ಪ್ರದೇಶ ರಾಜ್ಯದ ಧರ್ಮಶಾಲಾ ಬಳಿ ಇರುವ ಭಾಗ್ಸು ನಾಗ್ ಗ್ರಾಮದಲ್ಲಿ ಪ್ರವಾಹದಿಂದ ಹತ್ತಾರು ಕಾರುಗಳು ರಸ್ತೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಹಾಗೇ, ಶಿಮ್ಲಾದ ರಾಂಪುರ ಪ್ರದೇಶದ ಬಳಿ ಇರುವ ಝಕ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಹೈವೇಯಲ್ಲಿ ಕುಸಿದಿರುವ ಮಣ್ಣು, ಬಿದ್ದಿರುವ ಮರಗಳನ್ನು ತೆರವುಗೊಳಿಸಿ, ರಸ್ತೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.

ಎಎನ್​ಐ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಹಿಮಾಚಲಪ್ರದೇಶದ ಮಂಝಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಇಂದು ಮಾತ್ರವಲ್ಲದೆ ನಾಳೆ ಕೂಡ ಹಿಮಾಚಲಪ್ರದೇಶದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರಿಂದ ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು, ‘ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ತಂಡಗಳು (ಎನ್‌ಡಿಆರ್ಎಫ್) ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಪ್ರವಾಹ ಪೀಡಿತ ಪ್ರದೇಶಗಳನ್ನು ತಲುಪುತ್ತಿವೆ. ಪ್ರವಾಹ ಪರಿಸ್ಥಿತಿಯ ಕುರಿತು ಗೃಹ ಸಚಿವಾಲಯವು ನಿರಂತರವಾಗಿ ಗಮನಿಸುತ್ತಿದೆ. ಹಿಮಾಚಲ ಪ್ರದೇಶಕ್ಕೆ, ಕೇಂದ್ರದಿಂದ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುವುದು ಟ್ವೀಟ್‌ನಲ್ಲಿ ಹೇಳಿದ್ದಾರೆ.

Exit mobile version