ಕೋಲ್ಕತ್ತಾ : ಪಶ್ಚಿಮ ಬಂಗಾಳದ(West Bengal) ಮಾಜಿ ಸಚಿವ ಪಾರ್ಥ ಚಟರ್ಜಿ(Partha Chatterjee) ಅವರ ಸಹಾಯಕಿ ಅರ್ಪಿತಾ ಮುಖರ್ಜಿ(Arpitha Mukharjee) ಅವರ ಜೀವಕ್ಕೆ ಬೆದರಿಕೆ ಇದೆ ಎಂದು ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು, ವಿಶೇಷ ಮನಿ ಲಾಂಡರಿಂಗ್ ಕಾಯ್ದೆಯ(PMLA) ನ್ಯಾಯಾಲಯಕ್ಕೆ ತಿಳಿಸಿದ್ದು, ತನಿಖಾ ಸಂಸ್ಥೆಯು ಅರ್ಪಿತಾ ಮುಖರ್ಜಿ ಅವರಿಗೆ ನೀಡುವ ನೀರು ಮತ್ತು ಆಹಾರವನ್ನು ಪ್ರತಿದಿನ ತಪ್ಪದೇ ಪರಿಶೀಲಿಸಬೇಕು ಮತ್ತು ಅವರಿಗೆ ನೀಡುವ ಚಿಕಿತ್ಸೆ ಸೇರಿದಂತೆ ಎಲ್ಲದರ ಮೇಲೆಯೂ ನಿಗಾ ವಹಿಸಬೇಕು.
ಅರ್ಪಿತಾ ಮುಖರ್ಜಿ ಅವರಿಗೆ ನಿರ್ದಿಷ್ಟ ಬೆದರಿಕೆ ಇದೆ ಎಂದು ಗುಪ್ತಚರ ಮಾಹಿತಿಯಿಂದ ನಾವು ತಿಳಿದುಕೊಂಡಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇನ್ನು ಶಾಲಾ ಸೇವಾ ಆಯೋಗದ ನೇಮಕಾತಿ(SSC Scam) ಹಗರಣದಲ್ಲಿ ಬಂಧಿತರಾಗಿರುವ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಬೇಕೆಂದು ಇ.ಡಿ ವಕೀಲರು ಮನವಿ ಮಾಡಿದ್ದಾರೆ. ನವೆಂಬರ್ 1, 2012 ರಂದು, ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಪಾಲುದಾರಿಕೆಯಲ್ಲಿ ಕಂಪನಿಯನ್ನು ಸ್ಥಾಪಿಸಿದರು.
ಈ ಕಂಪನಿಯು ಮನಿ ಲಾಂಡರಿಂಗ್‌ನಲ್ಲಿ ತೊಡಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನಾವು ವಿಚಾರಿಸುತ್ತಿದ್ದೇವೆ. ನಾವು ಕೆಲವು ಅವಧಿಗಳ ಫೋನ್ ಡೇಟಾವನ್ನು ಸಹ ಮರುಪಡೆದುಕೊಂಡಿದ್ದೇವೆ. ಹಾಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ನಾವು ನ್ಯಾಯಾಲಯವನ್ನು ಕೋರುತ್ತೇವೆ ಎಂದು ಇಡಿ ವಕೀಲರು ತಿಳಿಸಿದ್ದಾರೆ. ಇನ್ನು ಪಾರ್ಥ ಚಟರ್ಜಿ ಅವರು ಹಣ ಕೇಳಿದ್ದಕ್ಕೆ ಸಾಕ್ಷಿ ಇಲ್ಲ ಎಂದು ಪಾರ್ಥ ಚಟರ್ಜಿ ಅವರ ವಕೀಲರು ಜಾಮೀನಿಗಾಗಿ ಮನವಿ ಮಾಡಿದ್ದಾರೆ. ಪಾರ್ಥ ಚಟರ್ಜಿ ಅವರು ಹಣ ಕೇಳಿದ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳಿಲ್ಲ.
ಅವರು ಯಾರನ್ನಾದರೂ ಹಣಕ್ಕಾಗಿ ಪ್ರೇರೇಪಿಸಿದ ಉದಾಹರಣೆ ಇಲ್ಲ. ಇವೆಲ್ಲವೂ ಆರೋಪಗಳಾಗಿವೆ. ಪಾರ್ಥ ಚಟರ್ಜಿ ಅವರು ಸುದೀರ್ಘ ಬಂಧನದಲ್ಲಿದ್ದಾರೆ. ಕೇವಲ ಪಾರ್ಥ ಚಟರ್ಜಿ ಸಹಕರಿಸುತ್ತಿಲ್ಲ ಎಂದು ಹೇಳುವುದು ಮಾನದಂಡವಲ್ಲ. ಯಾರಾದರೂ ಭಾಗಿಯಾಗದಿದ್ದರೆ, ಅವರು ಅದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ? ಎಂದು ಪಾರ್ಥ ಚಟರ್ಜಿ ಪರ ವಕೀಲರು ವಾದಿಸಿದ್ದಾರೆ.