ನವದೆಹಲಿ, ಜು. 08: ಕೊರೊನಾ ಮೂರನೇ ಅಲೆ ಏಳುವ ಹೊತ್ತಿಗೆ ಹೇಗಾದರೂ ಸರಿ ದೇಶದಲ್ಲಿ ಶೇ.70ರಷ್ಟಾದರೂ ಜನರಿಗೆ ಕೊವಿಡ್ 19 ಲಸಿಕೆ ನೀಡಿ ಮುಗಿಸಿರಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿದೇಶಿ ಲಸಿಕೆಗಳನ್ನು ಭಾರತದಲ್ಲಿ ಬಳಸುವ ಸಂಬಂಧ ಪರೀಕ್ಷೆಗಳು ತ್ವರಿತರಗತಿಯಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೊವ್ಯಾಕ್ಸ್ ಎಂಬ ಜಾಗತಿಕ ಮಟ್ಟದ ಕೊರೊನಾ ಲಸಿಕೆ ಹಂಚಿಕೆ ಕಾರ್ಯಕ್ರಮದಡಿ ಮೊದಲ ಬಾರಿಗೆ ಭಾರತಕ್ಕೆ ವಿದೇಶಿ ನಿರ್ಮಿತ ಕೊವಿಡ್ 19 ಲಸಿಕೆಗಳು ತಲುಪಲಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಕಾರ್ಯಕ್ರಮದಡಿ ಭಾರತಕ್ಕೆ 30-40 ಲಕ್ಷದಷ್ಟು ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳು ಆಗಸ್ಟ್ನಲ್ಲಿ ತಲುಪಲಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಲಸಿಕೆ ಮತ್ತು ರೋಗನಿರೋಧಕಗಳ ಜಾಗತಿಕ ಒಕ್ಕೂಟ (GAVI)ದ ವಕ್ತಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲಸಿಕೆ ಹಂಚಿಕೆ ಕೊವ್ಯಾಕ್ಸ್ ಕಾರ್ಯಕ್ರಮದಡಿ ಅಮೆರಿಕ ನೀಡಲಿರುವ ಲಸಿಕೆಯ ಡೋಸ್ಗಳು ಶೀಘ್ರದಲ್ಲೇ ಭಾರತಕ್ಕೆ ತಲುಪಲಿವೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.